ಲೀಡ್ಸ್: ವೈಯಕ್ತಿಕ ಸಾಧನೆಗಿಂತ ಭಾರತ ತಂಡ ಜುಲೈ 14 ರಂದು ಲಂಡನ್ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಐಸಿಸಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವುದು ಮುಖ್ಯ ಎಂದು ಉಪ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಶನಿವಾರ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದಿದ್ದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು 103 ರನ್ ಗಳ ಸಹಾಯದಿಂದ ಭಾರತ ತಂಡ ಶ್ರೀಲಂಕಾ ನೀಡಿದ್ದ 265 ರನ್ ಗುರಿಯನ್ನು ಸುಲಭವಾಗಿ ಮುಟ್ಟಿತು. ಆ ಮೂಲಕ ಒಟ್ಟು 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.
ಪ್ರಸಕ್ತ ಆವೃತ್ತಿಯಲ್ಲಿ ಅವರು ಐದನೇ ಶತಕ ಬಾರಿಸಿ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ (4 ಶತಕ) ಅವರ ದಾಖಲೆಯನ್ನು ಮುರಿದರು. ಅಲ್ಲದೇ, ವಿಶ್ವಕಪ್ ಟೂರ್ನಿಗಳಲ್ಲಿ ಆರು ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು. ಆದರೂ ಅವರಿಗೆ ಇದು ಮುಖ್ಯವಾಗುತ್ತಿಲ್ಲ. ಭಾರತ ವಿಶ್ವಕಪ್ ಜಯಿಸಿದ ಬಳಿಕ ನನ್ನ ಸಾಧನೆ ತೃಪ್ತಿ ನೀಡಲಿದೆ ಎಂದು ಹೇಳಿದ್ದಾರೆ.
ಒಂದು ಪಂದ್ಯದಲ್ಲಿ ಹೆಚ್ಚು ರನ್ ಗಳಿಸುವುದು ಅಥವಾ ಹೆಚ್ಚು ವಿಕೆಟ್ ಕಬಳಿಸುವ ಮೂಲಕ ನಮ್ಮ ಜವಾಬ್ದಾರಿ ಮುಗೀತು ಎಂದು ತಿಳಿಯಬಾರದು. ನಮ್ಮ ಶ್ರಮ ಪಂದ್ಯದ ಗೆಲುವಾಗಬೇಕು ಅಥವಾ ಪ್ರಶಸ್ತಿ ಗೆ ತಂಡ ಭಾಜನವಾಗಬೇಕು. ವಿಶೇಷವಾಗಿ ನಾಲ್ಕು ವರ್ಷಕ್ಕೊಮ್ಮೆ ಬರುವ ವಿಶ್ವಕಪ್ ನಲ್ಲಿ ತಂಡ ಚಾಂಪಿಯನ್ ಆಗಬೇಕು. ಇದು ವೈಯಕ್ತಿಕ ಸಾಧನೆಗಿಂತ ದೊಡ್ಡದು ಎಂದು ರೋಹಿತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಐಸಿಸಿ ವಿಶ್ವಕಪ್ ಗೆಲುವಿಗಾಗಿ ನಾಲ್ಕು ವರ್ಷಗಳು ಕಾಯಬೇಕು. ಪ್ರಶಸ್ತಿಗಾಗಿ ಸೆಮಿಫೈನಲ್ ಹಾಗೂ ಫೈನಲ್ ನಲ್ಲಿ ಕಡ್ಡಾಯವಾಗಿ ಗೆಲುವು ಪಡೆಯಬೇಕು. ಟೂರ್ನಿಯಲ್ಲಿ ಎಷ್ಟು ಶತಕ ಬಾರಿಸಿದರೂ ವಿಶ್ವಕಪ್ ಗೆಲ್ಲದ ಹೊರತು ಅದರಿಂದ ತೃಪ್ತಿ ಸಿಗುವುದಿಲ್ಲ ಎಂದು ತಿಳಿಸಿದರು.
ನಾನಿಲ್ಲಿರುವುದು ದಾಖಲೆ ಮಾಡಲಿಕ್ಕಲ್ಲ. ಬದಲಿಗೆ ಕ್ರಿಕೆಟ್ ಆಟದಲ್ಲಿ ಖುಷಿ ಅನುಭವಿಸಲು. ಹೆಚ್ಚು ರನ್ ಗಳಿಸಿ ವಿಶ್ವಕಪ್ ಗೆಲ್ಲುವು ಹಾದಿಯಲ್ಲಿ ತಂಡಕ್ಕೆ ನೆರವಾಗುವುದು ನನ್ನ ಗುರಿ. ನಿಜ ಹೇಳಬೇಕಂದರೆ ದಾಖಲೆಗಳ ಬಗ್ಗೆ ನಾನೆಂದೂ ಗಮನ ಹರಿಸುತ್ತಿಲ್ಲ ಎಂದು ಹಿಟ್ ಮನ್ ರೋಹಿತ್ ಶರ್ಮಾ ಹೇಳಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics