ಕ್ರಿಕೆಟ್

ಮೊದಲ ಸೆಮಿಫೈನಲ್ ಗೆ ಮಳೆ ಅಡ್ಡಿ, ಪಂದ್ಯ ನಾಳೆಗೆ ಮುಂದೂಡಿಕೆ ಇಲ್ಲ..?: ರೆಫರಿ ಹೊಸ ಟ್ವಿಸ್ಟ್!

Srinivasamurthy VN
ಲಂಡನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಇದೀಗ ಪಂದ್ಯದ ರೆಫರಿ ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಂತೆಯೇ ಮಳೆ ಪಂದ್ಯಕ್ಕೆ ರೆಫರಿ ಹೊಸ ಟ್ವಿಸ್ಟ್ ನೀಡಿದ್ದು, ಪಂದ್ಯವನ್ನು ನಾಳೆ ಮುಂದೂಡಿಕೆ ಮಾಡುವ ಬದಲಿಗೆ ಬೇರೆಯದ್ದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಸೆಮಿ ಫೈನಲ್ ಪಂದ್ಯಕ್ಕೆ ಭಾರಿ ಮಳೆ ಅಡ್ಡಿಪಡಿಸಿದ್ದು, ಪ್ರಸ್ತುತ ಆಟ ನಿಂತಿದೆ. ಇತ್ತೀಚಿನ ವರದಿಗಳು ಬಂದಾಗ ಮೈದಾನದಲ್ಲಿ ಮಳೆ ಮುಂದುವರೆದಿದ್ದು, ಪಂದ್ಯದ ರೆಫರಿ ಡೇವಿಡ್ ಬೂನ್ ಅವರು ಪಂದ್ಯದ ನಿಗದಿತ ಸಮಯವನ್ನು ಒಂದು ಗಂಟೆಗಳ ಕಾಲ ಮುಂದೂಡಿದ್ದಾರೆ. ಆ ಮೂಲಕ ದಿನದ ಕೊನೆಯ ಗಂಟೆಯ ವರೆಗೂ ಅಂಪೈರ್ ಗಳು ಕಾದು ನೋಡಲಿದ್ದು, ಒಂದು ವೇಳೆ ಇಂದು ಆಟ ಮುಂದುವರೆಸಲು ಸಾಧ್ಯವಾಗದಿದ್ದರೆ ಆಗ ಮತ್ತೆ ಪಂದ್ಯದ ರೆಫರಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
ಮ್ಯಾಚ್ ರೆಫರಿ ಡೇವಿಡ್ ಬೂನ್ ಮುಂದಿರುವ ಆಯ್ಕೆಗಳೇನು?
ತಜ್ಞರು ಅಭಿಪ್ರಾಯಪಟ್ಟಿರುವಂತೆ ಇಂದಿನ ಮಳೆ ಪೀಡಿತ ಪಂದ್ಯದ ಭವಿಷ್ಯ, ಐಸಿಸಿ ಮ್ಯಾಚ್ ರೆಫರಿ ಡೇವಿಡ್ ಬೂನ್ ಅವರ ಕೈಯಲ್ಲಿದ್ದು ಅವರು ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿರಲಿದೆ. ಐಸಿಸಿ ನಿಯಮಾವಳಿಗಳ ಪ್ರಕಾರ ಮ್ಯಾಚ್ ರೆಫರಿ ಮಳೆ ಪೀಡಿತ ಪಂದ್ಯದ ಕುರಿತು ಸಂಪೂರ್ಣ ನಿರ್ಧಾರ ಕೈಗೊಳ್ಳುವ ಜವಾಬ್ದಾರಿ ಇರುತ್ತದೆ. ಅದರಂತೆ ಇಂದಿನ ಪಂದ್ಯಕ್ಕೆ ರೆಫರಿ ಒಂದು ಗಂಟೆ ಹೆಚ್ಚುವರಿ ನೀಡಬಹುದು. ಈಗಾಗಲೇ ಸೆಮಿ ಫೈನಲ್ ಪಂದ್ಯಕ್ಕೆ 2 ಗಂಟೆ ಹೆಚ್ಚುವರಿ ಅವಧಿಯನ್ನು ಐಸಿಸಿ ಮೀಸಲಿರಿಸಿದ್ದು, ಅದರೊಂದಿಗೆ ಮತ್ತೆ 1 ಗಂಟೆ ಹೆಚ್ಚುವರಿ ಅವಧಿಯನ್ನು ರೆಫರಿ ನೀಡಬಹುದು.
ರೆಫರಿ ಪಂದ್ಯದ ಓವರ್ ಗಳನ್ನು ಕಡಿತ ಮಾಡುವ ಅವಕಾಶವಿದೆ. ಈಗಾಗಲೇ ನ್ಯೂಜಿಲೆಂಡ್ ತಂಡ 46 ಓವರ್ ಗಳನ್ನು ಆಡಿದ್ದು. ಬಾಕಿರುವ ನಾಲ್ಕು ಓವರ್ ಗಳನ್ನು ಆಡುವಂತೆ ಅವಕಾಶ ನೀಡಲು ರೆಫರಿ ಮುಂದಾಗದೇ ಇರಬಹುದು. ಅಂತೆಯೇ ಭಾರತಕ್ಕೆ ಗೆಲ್ಲಲು ನ್ಯೂಜಿಲೆಂಡ್ ನ ರನ್ ರೇಟ್, ಬಾಕಿ ಇರುವ ವಿಕೆಟ್ ಗಳನ್ನು ಆಧರಿಸಿ ಭಾರತಕ್ಕೆ ರನ್ ಮತ್ತು ಓವರ್ ಗಳ ಗುರಿ ನಿಗದಿ ಪಡಿಸಬಹುದು. ಒಂದು ವೇಳೆ ನಿಗಧಿತ ಹೆಚ್ಚುವರಿ ಸಮಯದಲ್ಲೂ ಆಟ ಆರಂಭವಾಗದೇ ಇದ್ದ ಸಂದರ್ಭದಲ್ಲಿ ಆಗ ಭಾರತಕ್ಕೆ ಪರಿಷ್ಕೃತ ರನ್ ಗಳ ಗುರಿ ನೀಡಬಹುದು. 

ಒಂದು ವೇಳೆ ಇಂದೇ ಪಂದ್ಯ ಮುಕ್ತಾಯಗೊಳಿಸಲು ನಿರ್ಧರಿಸಿದರೆ, ಭಾರತಕ್ಕೆ 20 ಓವರ್ ಗಳಲ್ಲಿ ಗೆಲ್ಲಲು 148 ರನ್ ಗಳ ಗುರಿ ನೀಡಬಹುದು. 

ಪಂದ್ಯ ನಾಳೆಗೆ ಮುಂದೂಡಿಕೆ ಇಲ್ಲ, ಮುಂದುವರಿಕೆ..!
ಅಂತೆಯೇ ಒಂದು ವೇಳೆ ಇಂದು ಪಂದ್ಯ ಮುನ್ನಡೆಸುವುದು ಅಸಾಧ್ಯವಾದರೆ, ಪಂದ್ಯವನ್ನು ರದ್ದು ಮಾಡದೇ ಮೀಸಲು ದಿನವಾದ ನಾಳೆ ಆಟವನ್ನು ಮುಂದುವರೆಸುವ ಸಾಧ್ಯತೆ ಕೂಡ ಇದೆ. ಇಂದು ಎಲ್ಲಿಗೆ ಆಟ ನಿಂತಿರುತ್ತದೆಯೋ ನಾಳೆ ಅಲ್ಲಿಂದಲೇ ಪಂದ್ಯವನ್ನು ಮುಂದುವರೆಸಲೂ ಕೂಡ ರೆಫರಿ ಸೂಚಿಸಬಹುದು ಎಂದು ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.
SCROLL FOR NEXT