ನವದೆಹಲಿ: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕಿವೀಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಹೆಚ್ಚು ಬೌಂಡರಿ ಆಧಾರದ ಮೇಲೆ ಚೊಚ್ಚಲ ಬಾರಿಗೆ ಇಂಗ್ಲೆಂಡ್ ವಿಶ್ವಕಪ್ ಮುಡಿಗೇರಿಸಿಕೊಂಡಿದೆ.
50 ಓವರ್ ಗಳ ಪಂದ್ಯ ಟೈ ಆದ ಸೂಪರ್ ಓವರ್ ನೀಡಲಾಯಿತು. ಸೂಪರ್ ಓವರ್ ನಲ್ಲಿಯೂ ಟೈ ಆದ ನಂತರ ಹೆಚ್ಚು ಬೌಂಡರಿಗಳ ಆಧಾರದ ಮೇಲೆ ವಿಶ್ವಕಪ್ ಇಂಗ್ಲೆಂಡ್ ಪಾಲಾಯಿತು. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ 17 ಬೌಂಡರಿಗಳನ್ನು ಬಾರಿಸಿದ್ದರೆ, ಇಂಗ್ಲೆಂಡ್ 24 ಬೌಂಡರಿಗಳನ್ನು ಪಡೆದಿತ್ತು.
ಬೌಂಡರಿಗಳ ಆಧಾರದ ಮೇಲೆ ಚಾಂಫಿಯನ್ ಪಟ್ಟ ನಿರ್ಧರಿಸುವ ಕುರಿತು ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ, ಮಾಜಿ ಕ್ರಿಕೆಟ್ ಆಟಗಾರರಾದ ಯುವರಾಜ್ ಸಿಂಗ್, ಮೊಹಮ್ಮದ್ ಕೈಪ್, ಬ್ರಿಟ್ಲೀ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
ಕ್ರಿಕೆಟ್ ನಲ್ಲಿ ಕೆಲ ನಿಯಮಗಳನ್ನು ಖಂಡಿತವಾಗಿಯೂ ಗಂಭೀರವಾಗಿ ನೋಡಬೇಕಾದ ಅಗತ್ಯವಿದೆ ಎಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ.
ಬೌಂಡರಿ ನಿಯಮವನ್ನು ಅರಗಿಸಿಕೊಳ್ಳುವುದು ಕಷ್ಟವಾಗಿದೆ. ಬೌಂಡರಿ ನಿಯಮದ ಆಧಾರದ ವಿಜೇತರನ್ನು ಆಯ್ಕೆ ಮಾಡಿದದ್ದು ನ್ಯೂಜಿಲೆಂಡ್ ತಂಡಕ್ಕೆ ದುಬಾರಿಯಾಯಿತು ಎಂದು ಮೊಹಮ್ಮದ್ ಕೈಪ್ ಟ್ವೀಟ್ ಮಾಡಿದ್ದಾರೆ.
ಬೌಂಡರಿ ನಿಯಮದ ಆಧಾರದ ಮೇಲೆ ವಿಜೇತ ತಂಡವನ್ನು ನಿರ್ಧರಿಸುವುದು ತುಂಬಾ ಅಪಾಯಕಾರಿಯಾಗಿದೆ. ಈ ನಿಯಮವನ್ನು ಬದಲಾಯಿಸಬೇಕಾಗಿದೆ ಎಂದು ಬ್ರಿಟ್ಲೀ ಅಸಮಾಧಾನ ಹೊರಹಾಕಿದ್ದಾರೆ.
ಈ ನಿಯಮವನ್ನು ಒಪ್ಪುವುದಿಲ್ಲ ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.