ಕ್ರಿಕೆಟ್

ವಿಶ್ವಕಪ್ ಫೈನಲ್: ಅಂಪೈರ್ ಕೆಟ್ಟ ತೀರ್ಪಿಗೆ ಕಿಡಿಕಾರಿದ ಮಾಜಿ ಅಂಪೈರ್ ಸೈಮನ್ ಟಫೆಲ್, ಈ ವಿಡಿಯೋದಲ್ಲಿ ಏನಿದೆ?

Vishwanath S
ಲಾರ್ಡ್ಸ್: 2019ರ ವಿಶ್ವಕಪ್ ಟೂರ್ನಿ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಇದರಲ್ಲಿ ಪ್ರಮುಖವಾಗಿ ಕಳಪೆ ಅಂಪೈರಿಂಗ್ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಫೈನಲ್ ಪಂದ್ಯದಲ್ಲೂ ಅಂಪೈರ್ ಧರ್ಮಸೇನಾ ಅವರ ಕಳಪೆ ಅಂಪೈರಿಂಗ್ ವಿರುದ್ಧ ಮಾಜಿ ಅಂಪೈರ್ ಸೈಮನ್ ಟಫೆಲ್ ಕಿಡಿಕಾರಿದ್ದಾರೆ. 
ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಕೊನೆಯ ಓವರ್ ನಲ್ಲಿ ಇಂಗ್ಲೆಂಡ್ ಗೆ ಗೆಲ್ಲಲು 15 ರನ್ ಗಳ ಅವಶ್ಯಕತೆ ಇತ್ತು. ಮೂರನೇ ಎಸೆತದಲ್ಲಿ ಬೆನ್ ಸ್ಟೋಕ್ಸ್ ಸಿಕ್ಸರ್ ಬಾರಿಸಿದ್ದರು. ಇದರಿಂದ ಇನ್ನು 3 ಎಸೆತದಲ್ಲಿ ಆಂಗ್ಲರಿಗೆ 9 ರನ್ ಬೇಕಿತ್ತು. ಈ ವೇಳೆ ಡೀಪ್ ಕವರ್ ನಲ್ಲಿ ಸ್ಟೋಕ್ಸ್ ಚೆಂಡನ್ನು ಬಾರಿಸಿದರು. ಎರಡು ರನ್ ತೆಗೆದುಕೊಳ್ಳುವಾಗ ಮಾರ್ಟಿನ್ ಗಲ್ಟಿಲ್ ಮಾಡಿದ ಥ್ರೋ ಸ್ಟೋಕ್ಸ್ ಬ್ಯಾಟ್ ಗೆ ತಗುಲಿ ಬೌಂಡರಿಗೆ ಹೋಗಿತ್ತು. ಇದಕ್ಕೆ ಅಂಪೈರ್ ಧರ್ಮಸೇನಾ ಇಂಗ್ಲೆಂಡ್ ಗೆ ಆರು ರನ್ ನೀಡಿದ್ದು ಇದೀಗ ವಿಶ್ವದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಮಾತನಾಡಿರುವ ಮಾಜಿ ಅಂಪೈರ್ ಸೈಮನ್ ಟಫೆಲ್ ಇಂಗ್ಲೆಂಡ್ ಗೆ ಆರು ರನ್ ಬದಲಿಗೆ ಐದು ರನ್ ನೀಡಬೇಕಿತ್ತು. ಆರು ರನ್ ನೀಡಿರುವುದು ತಪ್ಪು. ಐಸಿಸಿ ನಿಯಮದ ಪ್ರಕಾರ ಫೀಲ್ಡರ್ ಥ್ರೋ ಮಾಡುವ ಮೊದಲು ಇಬ್ಬರು ಬ್ಯಾಟ್ಸ್ ಮನ್ ಗಳು ಪರಸ್ಪರ ದಾಟಿ ಹೋಗಿರಬೇಕು. ಆಗ ಮಾತ್ರ ಎರಡನೇ ರನ್ ಮಾನ್ಯವಾಗುತ್ತದೆ. ಆದರೆ ಈ ಘಟನೆಯಲ್ಲಿ ಹೀಗಾಗಿರಲಿಲ್ಲ. ಹಾಗಾಗಿ ಐದು ರನ್ ಮಾತ್ರ ನೀಡಬೇಕಿತ್ತು ಮತ್ತು ಮುಂದಿನ ಎಸೆತವನ್ನು ಸ್ಟೋಕ್ಸ್ ಬದಲಾಗಿ ಆದಿಲ್ ರಶೀದ್ ಆಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. 
SCROLL FOR NEXT