ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕಾಗಿ ಇಂಗ್ಲೆಂಡ್ ತಂಡದ ಇಬ್ಬರು ಪ್ರಮುಖ ಬ್ಯಾಟ್ಸಮನ್ ಗಳಿಗೆ ಮತ್ತು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಗೆ ಮ್ಯಾಚ್ ರೆಫರಿ ದಂಡ ವಿಧಿಸಿದ್ದಾರೆ.
ಇಂಗ್ಲೆಂಡ್ ತಂಡದ ಆಟಗಾರರಾಜ ಜೇಸನ್ ರಾಯ್ ಮತ್ತು ಜೊಫ್ರಾ ಆರ್ಚರ್ ಅವರಿಗೆ ರೆಫರಿ ಪಂದ್ಯದ ಸಂಭಾವನೆಯ ಶೇ.15ರಷ್ಟನ್ನು ದಂಡವಾಗಿ ವಿದಿಸಿದ್ದು, ಅಲ್ಲದೆ ಅಂತಾರಾಷ್ಟ್ರೀಯ ರೇಟಿಂಗ್ ನಲ್ಲಿ ಒಂದು ಅಂಕವನ್ನು ಕಡಿತಗೊಳಿಸಿದ್ದಾರೆ.
ನಿನ್ನೆ ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ಬೌಲಿಂಗ್ ವೇಳೆ ಆರ್ಚರ್ ಎಸೆದ ಎಸತವನ್ನು ಅಂಪೈರ್ ವೈಡ್ ಎಂದು ಘೋಷಣೆ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಆರ್ಚರ್ ಅಂಪೈರ್ ರೊಂದಿಗೆ ವಾಗ್ದಾಳಿ ನಡೆಸಿದ್ದರು. ಇದು ಐಸಿಸಿ ನೀತಿ ಸಂಹಿತೆ ಕಲಂ 2.8ರ ಉಲ್ಲಂಘನೆಯಾಗಿದ್ದು, ಇದೇ ಕಾರಣಕ್ಕೆ ಮ್ಯಾಚ್ ರೆಫರಿ ಆರ್ಚರ್ ಗೆ ದಂಡ ವಿಧಿಸಿದ್ದಾರೆ. ಅಲ್ಲದೆ ಐಸಿಸಿ ರೇಟಿಂಗ್ಸ್ ಗಳಲ್ಲಿ ಒಂದು ಕಡಿತ ಕೂಡ ಮಾಡಿದ್ದಾರೆ.
ಅಂತೆಯೇ ಇಂಗ್ಲೆಂಡ್ ತಂಡದ ಮತ್ತೋರ್ವ ಆಟಗಾರ ಜೇಸನ್ ರಾಯ್ ಕೂಡ ಪಂದ್ಯದ ವೇಳೆ ಅಶ್ಲೀಲ ಪದ ಬಳಕೆ ಮಾಡಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಇದು ಐಸಿಸಿ ನೀತಿ ಸಂಹಿತೆ ಕಲಂ 2.3ರ ಉಲ್ಲಂಘನೆಯಾಗಿದ್ದು, ಈ ಕಾರಣಕ್ಕಾಗಿ ಅವರಿಗೆ ದಂಡ ವಿಧಿಸಲಾಗಿದೆ. ಅಲ್ಲದೆ ಜೇಸನ್ ರಾಯ್ ಅವರ ರೇಟಿಂಗ್ಸ್ ನಲ್ಲಿ ಒಂದು ಅಂಕ ಕಡಿತಗೊಳಿಸಲಾಗಿದೆ.
ಇನ್ನು ಇದೇ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಆರೋಪದ ಮೇರೆಗೆ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಗೂ ದಂಡ ಹಾಕಲಾಗಿದೆ. ಪಂದ್ಯದ ಸಂಭಾವನೆಯ ಶೇ.20ರಷ್ಟನ್ನು ದಂಡವಾಗಿ ಹೇರಲಾಗಿದೆ. ಅಲ್ಲದೆ ಅವರ ತಂಡದ ಇತರೆ ಆಟಗಾರರಿಗೆ ಪಂದ್ಯದ ಸಂಭಾವನೆಯ ಶೇ.10ರಷ್ಟನ್ನು ದಂಡವಾಗಿ ವಿಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics