ಲಂಡನ್: ಟೀಂ ಇಂಡಿಯಾ ಆರಂಭಿಕ ಆಟಗಾರ ಮತ್ತು ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಶೀಘ್ರದಲ್ಲೇ ತಂಡಕ್ಕೆ ವಾಪಸ್ ಆಗಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿನ್ನೆ ನ್ಯೂಜಿಲೆಂಡ್ ವಿರುದ್ಧ ಪಂದ್ಯ ಟಾಸ್ ಕೂಡ ಕಾಣದೇ ಮಳೆಗೆ ಆಹುತಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ, ಶಿಖರ್ ಧವನ್ ಕುರಿತಂತೆ ಮಾಹಿತಿ ನೀಡಿದರು. ಶಿಖರ್ ಧವನ್ ಇನ್ನೂ ಕೆಲ ವಾರಗಳ ಕಾಲ ಪ್ಲಾಸ್ಟರ್ ಹಾಕಿಕೊಂಡೇ ಇರಬೇಕಾಗುತ್ತದೆ. ಆದರೆ ಸಮಾಧಾನದ ವಿಚಾರವೆಂದರೆ ಆತ ಶೀಘ್ರ ಗುಣಮುಖನಾಗಲಿದ್ದು, ಟೂರ್ನಿಯ ಮಧ್ಯ ಭಾಗದಲ್ಲಿ ತಂಡ ಸೇರಿಕೊಳ್ಳಬಹುದು ಎಂದು ಹೇಳಿದ್ದಾರೆ.
ಧವನ್ ಬೇಗ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ತಂಡದ ಫಿಸಿಯೋ ಮತ್ತು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೂರ್ನಿಯ ಮಧ್ಯಭಾಗದಲ್ಲಿ ಆತ ತಂಡ ಸೇರಿಕೊಳ್ಳಬಹುದು. ಅಂತೆಯೇ ಸೆಮಿಫೈನಲ್ ವೇಳೆಗೆ ಆತ ಸಂಪೂರ್ಣ ಗುಣಮುಖನಾಗಿರಲಿದ್ದಾನೆ ಎಂಬ ವಿಶ್ವಾಸವಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಇನ್ನು ಕಳೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಶಿಖರ್ ಧವನ್ ಅದೇ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಎಡಗೈ ಹೆಬ್ಬರಳಿಗೆ ಗಾಯ ಮಾಡಿಕೊಂಡಿದ್ದರು. ಪಂದ್ಯದ ಬಳಿಕ ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು, ಧವನ್ ಎಡಗೈ ಹೆಬ್ಬರಳು ಮುರಿದಿರುವ ಕುರಿತು ಮಾಹಿತಿ ನೀಡಿದರು. ಅಲ್ಲದೆ ಕೆಲ ವಾರಗಳ ವಿಶ್ರಾಂತಿ ಅತ್ಯಗತ್ಯ ಎಂದು ಹೇಳಿದ್ದಾರೆ. ಹೀಗಾಗಿ ಧವನ್ ವಿಶ್ವಕಪ್ ಟೂರ್ನಿಗೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಬಿಸಿಸಿಐ ಧವನ್ ಗೆ ತಂಡದ ಜೊತೆಯಲ್ಲಿಯೇ ಇರುವಂತೆ ಸೂಚನೆ ನೀಡಿದೆ.
ಇನ್ನು ಧವನ್ ಅಲಭ್ಯತೆಯಿಂದಾಗಿ ತೆರವಾಗಿರುವ ಆರಂಭಿಕ ಸ್ಥಾನಕ್ಕೆ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದ ಕೆಎಲ್ ರಾಹುಲ್ ರನ್ನು ಅಂತಿಮಗೊಳಿಸಲಾಗಿದ್ದು, ನಾಲ್ಕನೇ ಕ್ರಮಾಂಕಕ್ಕಾಗಿ ಈ ವರೆಗೂ ಇನ್ನೂ ಯಾರನ್ನೂ ಅಂತಿಮಗೊಳಿಸಿಲ್ಲ, ಹೀಗಾಗಿ ನಾಲ್ಕನೇ ಕ್ರಮಾಂಕದ ರಹಸ್ಯ ಇನ್ನೂ ಮುಂದುವರೆದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos