ಕ್ರಿಕೆಟ್

ಬಾಂಗ್ಲಾದೇಶ ಸುಲಭ ತುತ್ತಲ್ಲ, ಭಾರತಕ್ಕೆ ಹೇಗೆ ಬೌಲಿಂಗ್ ಮಾಡಬೇಕು ಎಂಬುದು ನಮಗೆ ಗೊತ್ತು: ಕೋಚ್ ಸುನಿಲ್ ಜೋಶಿ

Srinivasamurthy VN
ಲಂಡನ್: ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಅಜೇಯರಾಗಿರಬಹುದು, ಆದರೆ ಟೀಂ ಇಂಡಿಯಾಗೆ ಬಾಂಗ್ಲಾದೇಶ ಖಂಡಿತಾ ಸುಲಭದ ತುತ್ತಾಗುವುದಿಲ್ಲ. ಭಾರತಕ್ಕೆ ಹೇಗೆ ಬೌಲಿಂಗ್ ಮಾಡಬೇಕು ಎಂಬುದು ನಮಗೆ ಗೊತ್ತು ಎಂದು ಬಾಂಗ್ಲಾದೇಶ ಕೋಚ್ ಸುನಿಲ್ ಜೋಶಿ ಹೇಳಿದ್ದಾರೆ.
ಇದೇ ಜುಲೈ 2ರಂದು ಎಡ್ಜ್ ಬ್ಯಾಸ್ಟನ್ ನಲ್ಲಿ ಭಾರತ-ಬಾಂಗ್ಲಾದೇಶ ಪಂದ್ಯ ನಡೆಯಲಿದ್ದು, ಸೆಮಿ ಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಬಾಂಗ್ಲಾದೇಶಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಪಂದ್ಯದ ಕುರಿತು ಮಾತನಾಡಿರುವ ಬಾಂಗ್ಲಾದೇಶದ ಕೋಚ್ ಹಾಗೂ ಕನ್ನಡಿಗ ಸುನಿಲ್ ಜೋಶಿ ಅವರು, ಟೂರ್ನಿಯಲ್ಲಿ ಬಾಂಗ್ಲಾದೇಶದ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಎಲ್ಲ ವಿಭಾಗಗಳಲ್ಲಿಯೂ ತಂಡದ ಪ್ರದರ್ಶನ ಉತ್ತುಂಗಕ್ಕೇರುತ್ತಿದೆ. ಹೀಗಾಗಿ ಟೂರ್ನಿಯಲ್ಲಿ ಬಾಂಗ್ಲಾದೇಶ ಖಂಡಿತಾ ಯಾವುದೇ ತಂಡಕ್ಕೂ ಸುಲಭದ ತುತ್ತಾಗುವುದಿಲ್ಲ. ಭಾರತಕ್ಕೆ ಹೇಗೆ ಬೌಲಿಂಗ್ ಮಾಡಬೇಕು ಅನ್ನೋದು ಗೊತ್ತಿದೆ ಎಂದು ಹೇಳಿದ್ದಾರೆ.
ಆ ಮೂಲಕ ಸದ್ಯ ಬಾಂಗ್ಲಾದೇಶ ಕ್ರಿಕೆಟ್ ತಂಡದ ಸ್ಪಿನ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸ್ಪಿನ್ ಮಾಂತ್ರಿಕ ಕನ್ನಡಿಗ ಸುನಿಲ್ ಜೋಶಿ ಟೀಂ ಇಂಡಿಯಾಗೆ ಪರೋಕ್ಷ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ಯಶಸ್ಸಿನ ಹಿಂದೆ ಸುನಿಲ್ ಜೋಶಿ ಮಾರ್ಗದರ್ಶನವಿದ್ದು, ಇದೇ ಕಾರಣಕ್ಕೆ ಟೂರ್ನಿಯಲ್ಲಿ ಬಾಂಗ್ಲಾದೇಶ ಪ್ರಬಲ ಪ್ರದರ್ಶನ ನೀಡುತ್ತಿದೆ. ಇನ್ನು ಈ ಹಿಂದೆ ಭಾರತ ತಂಡದ ಸಾಕಷ್ಟು ಆಟಗಾರರೊಂದಿಗೆ ಸುನಿಲ್ ಜೋಶಿ ಆಡಿರುವ ಅನುಭವ ಹೊಂದಿದ್ದಾರೆ. ಭಾರತದ ಬ್ಯಾಟಿಂಗ್ ಲೈನ್ ಹಾಗೂ ಬ್ಯಾಟ್ಸ್ ಮನ್‌ಗಳ ವೀಕ್ನೆಸ್ ಜೋಶಿಗೆ ಚೆನ್ನಾಗಿ ತಿಳಿದಿದೆ.  ಹೀಗಾಗಿ ಭಾರತ ಮತ್ತು ಬಾಂಗ್ಲಾ ನಡುವಿನ ತೀವ್ರ ಕುತೂಹಲ ಕೆರಳಿಸಿದೆ.
SCROLL FOR NEXT