ನವದೆಹಲಿ: ವಿಶ್ವ ಕ್ರಿಕೆಟ್ನಲ್ಲಿ ಸತತ ಗೆಲುವಿನೊಂದಿಗೆ ದಿಟ್ಟವಾಗಿ ಮುನ್ನುಗ್ಗುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡಕ್ಕೆ ಬಿಸಿಸಿಐ ಬಂಪರ್ ಘೋಷಣೆ ಮಾಡಿದ್ದು, ಮಹಿಳಾ ಕ್ರಿಕೆಟಿಗರೂ ಸೇರಿದಂತೆ ಎಲ್ಲ ಕ್ರಿಕೆಟಿಗರ ವಾರ್ಷಿಕ ವೇತನ ಒಪ್ಪಂದ ಪರಿಷ್ಕರಣೆ ಮಾಡಿದೆ.
2018-19ರ ಸಾಲಿನ ವಾರ್ಷಿಕ ಗುತ್ತಿಗೆಯಲ್ಲಿ ಬಿಸಿಸಿಐ ಈ ಬಂಪರ್ ಉಡುಗೊರೆ ನೀಡಿದ್ದು, ಇತ್ತೀಚಿನ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಬುಮ್ರಾ ಅವರನ್ನು ಎ ಪ್ಲಸ್ ಗ್ರೇಡ್ ಆಟಗಾರರ ಪಟ್ಟಿಗೆ ಸೇರಿಸಲಾಗಿದೆ. ಆ ಮೂಲಕ ಎ ಪ್ಲಸ್ ಆಟಗಾರರ ಪಟ್ಟಿಯಗೆ ಸೇರ್ಪಡೆಯಾದ ಮೂರನೇ ಆಟಗಾರ ಎಂಬ ಕೀರ್ತಿಗೂ ಬುಮ್ರಾ ಪಾತ್ರರಾಗಿದ್ದಾರೆ. ಇನ್ನು ಈ ಹಿಂದೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಎಪ್ಲಸ್ ಶ್ರೇಣಿಯಲ್ಲಿದ್ದರು. ಈ ಶ್ರೇಣಿಯ ಆಟಗಾರರಿಗೆ ವಾರ್ಷಿಕ ತಲಾ 7 ಕೋಟಿರೂ ವೇತನ ನೀಡಲಾಗುತ್ತಿದೆ.
ಅಂತೆಯೇ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಎಂಎಸ್ ಧೋನಿ ಎ ಶ್ರೇಣಿಯಲ್ಲಿ ಮುಂದುವರೆದಿದ್ದು, ಅವರು ವಾರ್ಷಿಕ ತಲಾ 5 ಕೋಟಿರೂ ವೇತನ ಪಡೆಯುತ್ತಿದ್ದಾರೆ. ಇತ್ತೀಚಿಗೆ ಆಸಿಸ್ ಪ್ರವಾಸದಲ್ಲಿ ಭಾರಿ ಸದ್ದು ಮಾಡಿದ್ದ ರಿಷಬ್ ಪಂತ್ ಕೂಡ ಎ ಗ್ರೇಡ್ ನಲ್ಲಿದ್ದು, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ಶಿಖರ್ ಧವನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಕುಲ್ದೀಪ್ ಯಾದವ್ ಈ ಪಟ್ಟಿಯಲ್ಲಿರುವ ಇತರೆ ಆಟಗಾರರಾಗಿದ್ದಾರೆ.
ಇತ್ತೀಚೆಗೆ ಅಸಭ್ಯ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯಾ ಹೆಸರು ಬಿ ಶ್ರೇಣಿಯಲ್ಲಿದ್ದು ಇವರು ವಾರ್ಷಿಕ 3 ಕೋಟಿ ವೇತನ ಪಡೆಯಲಿದ್ದಾರೆ, ಅಂತೆಯೇ ಈ ಪಟ್ಟಿಯಲ್ಲಿ ವೇಗಿ ಉಮೇಶ್ ಯಾದವ್, ಜಯುವೇಂದ್ರ ಚಾಹಲ್ ಕೂಡ ಇದ್ದಾರೆ. ಇನ್ನು ಸಿ ಗ್ರೇಡ್ ನಲ್ಲಿ ಕೇದಾರ್ ಜಾದವ್, ದಿನೇಶ್ ಕಾರ್ತಿಕ್, ಅಂಬಾಟಿ ರಾಯುಡು, ಮನೀಷ್ ಪಾಂಡೆ, ಹುನುಮ ವಿಹಾರಿ, ಖಲೀಲ್ ಅಹ್ಮದ್, ವೃದ್ಧಿಮಾನ್ ಸಾಹಾ ಇದ್ದು ಈ ಆಟಗಾರರು ತಲಾ 1 ಕೋಟಿ ವೇತನ ಪಡೆಯಲಿದ್ದಾರೆ.
ಇತ್ತ ಮಹಿಳಾ ಕ್ರಿಕೆಟ್ ನತ್ತ ಗಮನ ಹರಿಸಿದರೆ, ವಾರ್ಷಿಕ 50 ಲಕ್ಷ ವೇತನ ಪಡೆಯುವ ಏ ಶ್ರೇಣಿಯಲ್ಲಿ ಮಿಥಾಲಿ ರಾಜ್, ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನಾ ಮತ್ತು ಪೂನಂ ಯಾದವ್ ಇದ್ದಾರೆ. ಬಿ ಶ್ರೇಣಿಯಲ್ಲಿ ಎಕ್ತಾ ಬಿಶ್ತ್, ಝುಲನ್ ಗೋಸ್ವಾಮಿ, ಶಿಖಾ ಪಾಂಡೆ, ದೀಪ್ತಿ ಶರ್ಮಾ ಮತ್ತು ಜೆಮಿಮಾ ರಾಡ್ರಿಗಸ್ ಇದ್ದು ವಾರ್ಷಿಕ ತಲಾ 30 ಲಕ್ಷ ವೇತನ ಪಡೆಯಲಿದ್ದಾರೆ. ಸಿ ಗ್ರೇಡ್ ನಲ್ಲಿ ರಾಧಾ ಯಾದವ್, ಡಿ ಹೆಮಾಲತಾ, ಅನುಜ ಪಾಟೀಲ್, ವೇದ ಕೃಷ್ಣಮೂರ್ತಿ, ಮಾನ್ಸಿ ಜೋಶಿ, ಪುನಮ್ ರಾವ್ತ್, ಮೋನಾ ಮೆಶ್ರಾಮ್, ಅರುಂಧತಿ ರೆಡ್ಡಿ, ರಾಜೇಶ್ವರಿ ಗಾಯಕ್ವಾಡ್, ತಾನಿಯಾ ಭಾಟಿಯಾ ಮತ್ತು ಪೂಜಾ ವಸ್ತ್ರಕರ್ ಇದ್ದು ಇವರು ವಾರ್ಷಿಕ ತಲಾ 10 ಲಕ್ಷ ವೇತನ ಪಡೆಯಲಿದ್ದಾರೆ