ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದ ಮಸೀದಿಯಲ್ಲಿ ನಡೆದ ಶೂಟೌಟ್ ಸಂದರ್ಭದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ ಕೂದಲೆಳೆ ಅಂತರದಲ್ಲಿ ಉಗ್ರನ ಶೂಟಿಂಗ್ ನಿಂದ ಪಾರಾಗಿದೆ.
ಹೌದು.. ಹ್ಯಾಗ್ಲೆ ಪಾರ್ಕ್ ಸಮೀಪ ಮಸೀದಿಯಲ್ಲಿ ಶೂಟೌಟ್ ನಡೆದಿದ್ದು, ಬಂದೂಕು ಧಾರಿಯೋರ್ವ ಆಟೋಮ್ಯಾಟಿಕ್ ಮಷಿನ್ ಗನ್ ಮೂಲಕ ಗುಂಡಿನ ದಾಳಿ ನಡೆಸಿದ್ದ. ಮೂಲಗಳ ಪ್ರಕಾರ ಕ್ರಿಕೆಟ್ ಆಟಗಾರರನ್ನು ಗುರಿಯಾಗಿಸಿಕೊಂಡೇ ಈ ದಾಳಿ ನಡೆದಿದೆಯೇ ಎನ್ನುವ ಅನುಮಾನ ಕಾಡಿದೆ. ಹ್ಯಾಗ್ಲೆ ಪಾರ್ಕ್ ಸಮೀಪ ಇದ್ದ ಮಸೀದಿ ಬಳಿ ಬಾಂಗ್ಲಾ ಕ್ರಿಕೆಟ್ ತಂಡ ತೆರಳಿತ್ತು. ಗುಂಡಿನ ದಾಳಿ ನಡೆದ ನಂತರ ಎಲ್ಲ ಆಟಗಾರರು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಬಾಂಗ್ಲಾ ದೇಶದ ಪತ್ರಕರ್ತ ಮೊಹ್ಮದ್ ಇಸ್ಲಾಮ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಬಾಂಗ್ಲಾ ಕ್ರಿಕೆಟ್ ತಂಡ ಕೂದಲೆಳೆಯಲ್ಲಿ ಬಚಾವ್ ಆಗಿ ಪ್ರಾಣ ಉಳಿಸಿಕೊಂಡಿದೆ. ದೇವರು ನಮ್ಮನ್ನು ರಕ್ಷಿಸಿದ್ದಾರೆ ಎಂದು ಆಟಗಾರರು ಟ್ವೀಟ್ ಮಾಡಿಕೊಂಡಿದ್ದಾರೆ.
ಸದ್ಯ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಕ್ರಿಕೆಟ್ ಆಟಗಾರರನ್ನು ಗುರಿಯಾಗಿಸಿಕೊಂಡೇ ಈ ದಾಳಿ ನಡೆದಿದೆಯೇ ಎನ್ನುವ ಅನುಮಾನ ಕಾಡಿದೆ. ಇನ್ನು, ಶೂಟೌಟ್ ವೇಳೆ ಸಾಕಷ್ಟು ಮಂದಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಎಷ್ಟು ಜನ ಮೃತಪಟ್ಟಿದ್ದಾರೆ ಎನ್ನುವ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ಪ್ರತ್ಯಕ್ಷದರ್ಶಿಗಳು ದಾಳಿವೇಳೆ ಸಾಕಷ್ಟು ಜನರು ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ. “ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯೋರ್ವ ಗನ್ ಹಿಡಿದುಕೊಂಡು ನಿಂತಿದ್ದ. ಸಾಕಷ್ಟು ಬಾರಿ ಗುಂಡಿನ ಮೊರೆತ ಕೇಳಿದೆ. ಸಾಕಷ್ಟು ಜನರು ಮೃತಪಟ್ಟ ಅನುಮಾನವಿದೆ,” ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.