ಕ್ರಿಕೆಟ್

'ಗೆಲುವು ಕಸಿದ ನೋಬಾಲ್': ಅಂಪೈರ್ ಗಳ ಮಹಾ ಎಡವಟ್ಟಿಗೆ ಆರ್ ಸಿಬಿ ಅಭಿಮಾನಿಗಳ ರೌದ್ರಾವತಾರ!

Srinivasamurthy VN
ಬೆಂಗಳೂರು: ಗೆದ್ದೇ ಬಿಟ್ಟುವು ಎಂದು ಭಾವಿಸಿದ್ದ ಪಂದ್ಯದಲ್ಲಿ ಅಂಪೈರ್ ಗಳ ಮಹಾ ಎಡವಟ್ಟಿನಿಂದಾಗಿ ಆರ್ ಸಿಬಿ ಸೋಲು ಕಂಡಿದ್ದು, ಇದೀಗ ಆನ್ ಫೀಲ್ಡ್ ಅಂಪೈರ್ ಗಳ ವಿರುದ್ಧ ಆರ್ ಸಿಬಿ ಅಭಿಮಾನಿಗಳು ತಮ್ಮ ರೌದ್ರಾವತಾರ ಪ್ರದರ್ಶಿಸಿದ್ದಾರೆ.
ಹೌದು.. ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ತವರಿನ ತಂಡ ಬೆಂಗಳೂರು ರಾಯಲ್ ಚಾಲೆಂಜರ್ಸ್ ಕೇವಲ 6 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು. ಮುಂಬೈ ನೀಡಿದ 188 ರನ್ ಗಳ ಬೃಹತ್ ಗುರಿಯನ್ನು ಬೆನ್ನುಹತ್ತಿದ ಬೆಂಗಳೂರು ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ (46 ರನ್) ಹಾಗೂ ಸ್ಫೋಟಕ ಬ್ಯಾಟ್ಸಮನ್ ಎಬಿಡಿ ವಿಲಿಯರ್ಸ್ (ಅಜೇಯ 70 ರನ್) ಬೆನ್ನುವಾಗಿ ನಿಂತಿದ್ದರು.
ಆರ್​ಸಿಬಿ 67 ರನ್ ​ಗೆ 2 ವಿಕೆಟ್ ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿದಾಗ ಜತೆಯಾದ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಗೆಲುವಿನ ಆಸೆ ಬಲಪಡಿಸಿದರು. ಇವರಿಬ್ಬರು 3ನೇ ವಿಕೆಟ್​ಗೆ 49 ರನ್ ಜತೆಯಾಟವಾಡಿದರು. ಇನಿಂಗ್ಸ್ ನ 14ನೇ ಓವರ್ ನಲ್ಲಿ ಗೆಲುವಿಗೆ 39 ಎಸೆತಗಳಲ್ಲಿ 72 ರನ್ ಬೇಕಿದ್ದಾಗ ಕೊಹ್ಲಿ, ಬುಮ್ರಾ ಎಸೆತದಲ್ಲಿ ಪುಲ್ ಮಾಡಲು ಯತ್ನಿಸಿ ಮಿಡ್ ವಿಕೆಟ್ ನಲ್ಲಿದ್ದ ಹಾರ್ದಿಕ್ ಪಾಂಡ್ಯಾಕ್ಕೆ ಕ್ಯಾಚ್ ನೀಡಿದರು. ಬಳಿಕ ಎಬಿ ಡಿವಿಲಿಯರ್ಸ್ ಏಕಾಂಗಿ ಹೋರಾಟ ಮುಂದುವರಿಸಿದರು. ಆದರೆ ಬುಮ್ರಾ ಬಿಗಿ ದಾಳಿ ಎದುರು ಚೇಸಿಂಗ್ ಸುಲಭವಾಗಿರಲಿಲ್ಲ. ಇನಿಂಗ್ಸ್ ನ 17ನೇ ಓವರ್​ ನಲ್ಲಿ ಕೇವಲ 1 ರನ್ ಬಿಟ್ಟುಕೊಟ್ಟ ಬುಮ್ರಾ, ಹೆಟ್ಮೆಯರ್ (5) ವಿಕೆಟ್ ಕಬಳಿಸಿದರು. ಬಳಿಕ 19ನೇ ಓವರ್​ ನಲ್ಲಿ ಗ್ರಾಂಡ್​ ಹೋಮ್ ವಿಕೆಟ್ ಕಬಳಿಸಿದ್ದಲ್ಲದೆ ಕೇವಲ 5 ರನ್ ಬಿಟ್ಟುಕೊಟ್ಟರು. ಇದರಿಂದ ಆರ್ ​ಸಿಬಿ ಅಂತಿಮ ಓವರ್​ನಲ್ಲಿ 17 ರನ್ ಗಳಿಸುವ ಕಠಿಣ ಸವಾಲು ಪಡೆಯಿತು. 
ಮಾಲಿಂಗ ಎಸೆದ ಅಂತಿಮ ಓವರ್ ​ನಲ್ಲಿ 10 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮಾಲಿಂಗ ಎಸೆದ ಕೊನೇ ಎಸೆತದಲ್ಲಿ ಆರ್ ಸಿಬಿ ಗೆಲುವಿಗೆ 7 ರನ್ ಅಗತ್ಯವಿತ್ತು. ಈ ವೇಳೆ ಶಿವಂ ದುಬೇ ಲಾಂಗ್ ​ಆನ್​ ನತ್ತ ಚೆಂಡನ್ನು ಬಾರಿಸಿ 1 ರನ್ ಪೇರಿಸಿದ ಬೆನ್ನಲ್ಲಿಯೇ ಮುಂಬೈ ವಿಜಯೋತ್ಸವ ಆರಂಭಿಸಿತ್ತು. ಆದರೆ, ಮಾಲಿಂಗ ಎಸೆದ ಈ ಎಸೆತ ನೋಬಾಲ್ ಆಗಿದ್ದನ್ನು ಅಂಪೈರ್ ಎಸ್.ರವಿ ಗಮನಿಸಲಿಲ್ಲ. ಆದರೆ ಇದನ್ನು ಗಮನಿಸಿದ್ದ ಆರ್ ಸಿಬಿ ಅಭಿಮಾನಿಗಳು ಕ್ರೀಡಾಂಗಣದಲ್ಲೇ ನೋಬಾಲ್ ನೋಬಾಲ್ ಎಂದು ಕೂಗಿದರು.
ಬಳಿಕ ಸಾಮಾಜಿಕ ಜಾಲತಾಣಗಳಲ್ಲೂ ಅಂಪೈರ್ ಗಳು ಮಾಡಿದ ಎಡವಟ್ಟನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ.
SCROLL FOR NEXT