ಕಾರ್ಡಿಫ್: ಐಸಿಸಿ ವಿಶ್ವಕಪ್ ಟೂರ್ನಿಯ ತನ್ನ 2ನೇ ಅಭ್ಯಾ, ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಭಾರತ ತಂಡದ ಹುಮ್ಮಸ್ಸು ವಾಪಸ್ ಆಗಿದೆ ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, 2ನೇ ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ಧೋನಿ ಶತಕಗಳು ನಿಜಕ್ಕೂ ತಂಡದ ಬ್ಯಾಟಿಂಗ್ ಗೆ ಬಲ ತಂದಿದೆ. ಪ್ರಮುಖವಾಗಿ ನಾಲ್ಕನೇ ಕ್ರಮಾಂಕದಲ್ಲಿ ಆಡಿ ಶತಕ ಸಿಡಿಸಿರುವ ಕೆಎಲ್ ರಾಹುಲ್ ಆಟ ಶ್ಲಾಘನೀಯ. ನಾಲ್ತನೇ ಕ್ರಮಾಂಕದಲ್ಲಿ ರಾಹುಲ್ ಸಕ್ಸಸ್ ನಿಜಕ್ಕೂ ತಂಡಕ್ಕೆ ದೊಡ್ಡ ಬಲ ನೀಡಿದೆ ಎಂದು ಹೇಳಿದ್ದಾರೆ.
'ಇಂದಿನ ಪಂದ್ಯದ ಅತೀ ದೊಡ್ಡ ಸಕಾರಾತ್ಮಕ ಅಂಶವೆಂದರೆ ಕೆಎಲ್ ರಾಹುಲ್ ಆಟ. ನಾಲ್ಕನೇ ಕ್ರಮಾಂಕದಲ್ಲಿ ರಾಹುಲ್ ಸಕ್ಸಸ್ ಇಡೀ ತಂಡಕ್ಕೆ ಖುಷಿ ನೀಡಿದೆ. ಆ ಮೂಲಕ ತಂಡಕ್ಕಿದ್ದ ಮಧ್ಯಮ ಕ್ರಮಾಂಕದ ಗೊಂದಲ ಈ ಮೂಲಕ ತೀರಿದೆ. ತಂಡದಲ್ಲಿ ಪ್ರತೀಯೊಬ್ಬರಿಗೂ ಅವರದೇ ಆದ ಪಾತ್ರವಿದ್ದು, ಪ್ರಸ್ತುತ ರಾಹುಲ್ ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಅವರಿಂದ ಇಂತಹುದೇ ಪ್ರದರ್ಶನ ನಿರೀಕ್ಷಿಸಬಹುದು ಎಂದು ಕೊಹ್ಲಿ ಹೇಳಿದ್ದಾರೆ.
ಇದೇ ವೇಳೆ ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ವೈಫಲ್ಯದ ಕುರಿತು ಮಾತನಾಡಿದ ಕೊಹ್ಲಿ, ಆರಂಭಿಕರಾಗಿ ಧವನ್ ಮತ್ತು ರೋಹಿತ್ ಸಮರ್ಥರಾಗಿದ್ದಾರೆ. ಇಬ್ಬರೂ ಆಟಗಾರರಿಗೆ ಸಾಕಷ್ಟು ಅಭ್ಯಾಸಕ್ಕೆ ಸಮಯ ದೊರೆಯಲಿಲ್ಲ. ಐಸಿಸಿ ಟೂರ್ನಿಗಳಲ್ಲಿ ಈ ಇಬ್ಬರು ಆಟಗಾರರಿಂದ ಸಾಕಷ್ಟು ರನ್ ಗಳನ್ನು ನಿರೀಕ್ಷೆ ಮಾಡಬಹುದು. ಇದು ಈ ಹಿಂದಿನ ಸಾಕಷ್ಟು ಟೂರ್ನಿಗಳಲ್ಲಿ ಸಾಬೀತಾಗಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷೆ ಮಾಡಬಹುದು. ಧೋನಿ ಮತ್ತು ಹಾರ್ದಿಕ್ ಪಾಂಡ್ಯಾ ಕೂಡ ಅತ್ಯುತ್ತಮವಾಗಿ ಬ್ಯಾಟ್ ಬೀಸಿದರು ಎಂದು ಹೇಳಿದರು.
ಇದೇ ವೇಳೆ ಬೌಲಿಂಗ್ ವಿಭಾಗವನ್ನೂ ಶ್ಲಾಘಿಸಿದ ಧೋನಿ, ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಪ್ರಮುಖ ಆರು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ನಮ್ಮಲ್ಲಿ ಕ್ವಾಲಿಟಿ ಸ್ಪಿನ್ನರ್ ಗಳಿದ್ದು, ನಿರ್ಣಾಯಕ ಸಂದರ್ಭಗಳಲ್ಲಿ ವಿಕೆಟ್ ಪಡೆಯುವ ಮೂಲಕ ಕುಲದೀಪ್ ಯಾದವ್ ಮತ್ತು ಚಾಹಲ್ ಎದುರಾಳಿಗಳ ಮೇಲೆ ಒತ್ತಡ ಹೇರಿದರು. ಬುಮ್ರಾ ಕೂಡ ನಿರ್ಣಾಯಕ ವಿಕೆಟ್ ಪಡೆದು ತಂಡಕ್ಕೆ ನೆರವಾದರು. ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಬ್ಯಾಟಿಂಗ್ ಮಾಡುವ ವೇಳೆ ಚೆಂಡು ಕೊಂಚ ಸ್ವಿಂಗ್ ಆಗುತ್ತದೆ. ಹೀಗಾಗಿ ಎರಡನೇ ಬ್ಯಾಟಿಂಗ್ ವೇಳೆ ಮೊದಲ 15 ಓವರ್ ಗಳು ನಿರ್ಣಾಯಕವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ತಂಡವಾದರೂ ಟಾಸ್ ಗೆದ್ದ ಬಳಿಕ ಚೇಸಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ. ಅಂತೆಯೇ ಕೊನೆಯ 15 ಓವರ್ ಗಳೂ ತಂಡದ ಫಲಿತಾಂಶವನ್ನೇ ಬದಲಿಸಿ ಬಿಡುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.