ಕ್ರಿಕೆಟ್

ಕೊಹ್ಲಿಯನ್ನು ಆರಂಭದಲ್ಲೇ ಕಟ್ಟಿಹಾಕುವುದು ಒಳಿತು: ಟ್ರೆಂಟ್‌ ಬೌಲ್ಟ್‌

Nagaraja AB

ನವದೆಹಲಿ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ವಿಶ್ವಕಪ್‌ ಟೂರ್ನಿಯ ಅತ್ಯಂತ ಪ್ರಮುಖ ಆಟಗಾರನಾಗಿದ್ದು, ಅವರನ್ನು ಆರಂಭದಲ್ಲೇ ಕಟ್ಟಿಹಾಕಬೇಕು. ಇಲ್ಲವಾದಲ್ಲಿ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನ್ಯೂಜಿಲೆಂಡ್‌ ತಂಡದ ಹಿರಿಯ ವೇಗಿ ಟ್ರೆಂಟ್‌ ಬೌಲ್ಟ್  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಸಿಸಿ ವಿಶ್ವಕಪ್‌ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌, ಭಾರತದ ವಿರುದ್ಧ 6 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಟ್ರೆಂಟ್‌ ಬೌಲ್ಟ್‌ ಮಾರಕ ದಾಳಿ ನಡೆಸಿ ನಾಲ್ಕು ವಿಕೆಟ್‌ ಪಡೆದಿದ್ದು, ಭಾರತ ಕೇವಲ 179 ರನ್‌ಗಳಗೆ ಆಲ್‌ಔಟ್‌ ಆಗಿತ್ತು.

ಈ ಬಗ್ಗೆ ಸುದ್ದಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಬೌಲ್ಟ್‌," ವಿರಾಟ್‌ ಕೊಹ್ಲಿ ಎದುರು ಆಕ್ರಮಣಕಾರಿ ಬೌಲಿಂಗ್‌ ಮಾಡುವುದು ಅನಿವಾರ್ಯ. ಇಲ್ಲವಾದಲ್ಲಿ ನೀವು ಮಾಡಿದ ಒಂದು ತಪ್ಪಿನಿಂದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಟೀಂ ಇಂಡಿಯಾ ನಾಯಕನ ವಿಕೆಟ್‌ ಅನ್ನು ಬಹುಬೇಗ ಉರುಳಿಸಬೇಕು. ಇದು ಸಾಧ್ಯವಾಗದಿದ್ದಲ್ಲಿ ಅವರೊಬ್ಬರೇ ತಂಡದ ಫಲಿತಾಂಶವನ್ನು ಬದಲಾಯಿಸಲಿದ್ದಾರೆ" ಎಂದರು.

ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್‌ ಜತೆಗೆ, ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಹಾಗೂ ಇಂಗ್ಲೆಂಡ್‌ ತಂಡದ ಜೋ ರೂಟ್‌  ಕೂಡ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಅವರ ಬಗ್ಗೆ ಹೆಚ್ಚು ಏನೂ ಹೇಳದ ಬೌಲ್ಟ್‌, ಅವರ ಎದುರು ಬೌಲಿಂಗ್ ಮಾಡುವ ಅವಕಾಶ ಸಿಕ್ಕಾಗ ಅದನ್ನು ಪರಿಪೂರ್ಣವಾಗಿ ನಿರ್ವಹಿಸುತ್ತೇನೆ ಎಂದು ಬೌಲ್ಟ್‌ ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT