ಕ್ರಿಕೆಟ್

ಕರ್ತಾರ್‌ಪುರಕ್ಕೆ ಪ್ರಯಾಣಿಸಲು ಕೊನೆಗೂ ಸಿಧುಗೆ ಭಾರತದಿಂದ ಷರತ್ತುಬದ್ಧ ಅನುಮತಿ!

Vishwanath S

ನವದೆಹಲಿ: ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ಕೊನೆಗೂ ಕರ್ತಾರ್‌ಪುರ ಸಾಹೀಬ್ ಗುರುದ್ವಾರ ಪ್ರವಾಸಕ್ಕಾಗಿ ಗುರುವಾರ ಅನುಮತಿ ದೊರೆತಿದೆ. 

ಆದಾಗ್ಯೂ, ಕಾಂಗ್ರೆಸ್ ನಾಯಕ ನವೆಂಬರ್ 9ರಂದು ಮೊದಲ ಯಾತ್ರಿಕರ ತಂಡದಲ್ಲಿ ಹೋಗುವ ಕಡ್ಡಾಯ ಅನುಮತಿ, 'ಷರತ್ತು ಬದ್ಧವಾಗಿದೆ' ಎಂದು ಮೂಲಗಳು ತಿಳಿಸಿವೆ. ಈ ತಂಡದಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತಿತರರು ಸೇರಿದ್ದಾರೆ.
 
ನವೆಂಬರ್ 9 ರಂದು ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಮೂಲಕ ಪ್ರಯಾಣಿಸಲು ಶಾಸಕರಾದ ಎಸ್. ಸಿಧು ಅವರಿಗೆ ರಾಜಕೀಯ ಅನುಮತಿ ನೀಡಲಾಗಿದೆ ಎಂದು ಮೂಲವೊಂದು ತಿಳಿಸಿದೆ. 

ಇಂದು ಬೆಳಗ್ಗೆ ಸಿಧು ಅವರು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರಿಗೆ ಬರೆದ ಮೂರನೇ ಪತ್ರದಲ್ಲಿ, ತಾವು ಕಾನೂನು ಪಾಲಿಸುವ ಪ್ರಜೆ ಎಂದು ಹೇಳಿದ್ದರು. ಕೇಂದ್ರ ಸರ್ಕಾರದ ಔಪಚಾರಿಕ ಅನುಮೋದನೆಯ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡಲು ಬಯಸುತ್ತಿರುವುದಾಗಿಯೂ ಅವರು ಹೇಳಿದ್ದರು. 

ಆದರೆ ಅವರು ಪರೋಕ್ಷವಾಗಿ ಎಚ್ಚರಿಕೆಯನ್ನೂ ನೀಡಿದ್ದರು. ಸರ್ಕಾರವು ಯಾವುದೇ ನಿರ್ಬಂಧ ವಿಧಿಸಿದರೆ ಕಾನೂನು ಪಾಲಿಸುವ ಪ್ರಜೆಯಾಗಿ ನಾನು ಹೋಗುವುದಿಲ್ಲ. ಆದರೆ ನೀವು ನನ್ನ ಮೂರನೇ ಪತ್ರಕ್ಕೂ ಪ್ರತಿಕ್ರಿಯಿಸದಿದ್ದರೆ, ಅರ್ಹ ವೀಸಾದಲ್ಲಿ ಪಾಕಿಸ್ತಾನಕ್ಕೆ ಹೋಗುವ ಲಕ್ಷಾಂತರ ಸಿಖ್ ಭಕ್ತರ ಜೊತೆ ನಾನು ಕೂಡ ಪಾಕಿಸ್ತಾನಕ್ಕೆ ಹೋಗುತ್ತೇನೆ. ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ಸಿಧು ಎಚ್ಚರಿಕೆಯ ಧಾಟಿಯಲ್ಲಿ ಬರೆದಿದ್ದರು.  

ಅವರು ಏನು ಮಾಡುತ್ತಾರೆಂದು ನೋಡೋಣ, ಅದು ಅವರಿಗೆ ಬಿಟ್ಟದ್ದು. ಕರ್ತಾರ್‌ಪುರ ಕಾರಿಡಾರ್ ಒಂದು ದೊಡ್ಡ ಕಾರ್ಯಕ್ರಮವಾಗಿದೆ ಮತ್ತು ಆದ್ದರಿಂದ ನಾವು ವ್ಯಕ್ತಿಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ ಎಂದು ತಮ್ಮ ವಾರದ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದರು.

ರಾಜಕಾರಣಿಗಳು ಮತ್ತು ವಿಧಾನಸಭೆ ಮತ್ತು ಸಂಸತ್ತಿನ ಚುನಾಯಿತ ಸದಸ್ಯರು ನೇಪಾಳದಂತಹ ದೇಶಗಳಿಗೆ ಪ್ರಯಾಣಿಸಲು ಸಹ ಅನುಮತಿ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಕ್ರಿಕೆಟಿಗನೂ ಆಗಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಸಿಧು ಅವರಿಗೆ ವೈಯಕ್ತಿಕ ಆಹ್ವಾನ ನೀಡಿದ್ದರು.

SCROLL FOR NEXT