ಕ್ರಿಕೆಟ್

ಪಿಂಕ್ ಬಾಲ್ ಟೆಸ್ಟ್ : ಬಾಂಗ್ಲಾ ವಿರುದ್ಧದ  ಸರಣಿ ವೈಟ್ ವಾಶ್ ಮಾಡಿದ ಟೀಂ ಇಂಡಿಯಾ, ವಿಶ್ವದಾಖಲೆ ನಿರ್ಮಾಣ

Nagaraja AB

ಕೊಲ್ಕತ್ತಾ: ಎರಡೂವರೆ ದಿನಗಳಲ್ಲಿಯೇ  ಬಾಂಗ್ಲಾದೇಶ ವಿರುದ್ಧದ ಹೊನಲು ಬೆಳಕಿನ ಪಂದ್ಯ ಗೆಲ್ಲುವ ಮೂಲಕ ಸರಣಿ ವೈಟ್ ವಾಶ್ ಮಾಡಿದ  ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ನಾಲ್ಕನೇ ಇನ್ಸಿಂಗ್ ವಿಜಯದೊಂದಿಗೆ ವಿಶ್ವದಾಖಲೆ ನಿರ್ಮಾಣ ಮಾಡಿದೆ. 

ಈಡನ್ ಗಾರ್ಡನ್ ಮೈದಾನದಲ್ಲಿ 2-0 ಅಂತರದಲ್ಲಿ ಸರಣಿ ಗೆಲುವ ಮೂಲಕ ಟೀಂ ಇಂಡಿಯಾ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅಗ್ರ ಸ್ಥಾನದಲ್ಲಿ ಉಳಿಯಿತು.

ಪಂದ್ಯದ ಮೂರನೇ ದಿನವಾದ ಇಂದು ಉಮೇಶ್ ಯಾದವ್, ಬೌನ್ಸರ್ ಮೂಲಕ ಇಬಾದತ್ ಹುಸೇನ್ ಅವರನ್ನು ಔಟ್ ಮಾಡಿದರು.ಆದರೆ, ಅರ್ಧಶತಕ ದಾಖಲಿಸಿ ಕ್ರೀಸ್ ಗೆ ಭದ್ರವಾಗಿ ಕಟ್ಟಿಕೊಂಡಿದ್ದ ಬಾಂಗ್ಲಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮುಷ್ಪಿಕರ್ ರಹೀಮ್  ಭಾರತ ತಂಡಕ್ಕೆ ಜಯ ತಡವಾಗಿಸುವ ಎಲ್ಲಾ ಪ್ರಯತ್ನ ನಡೆಸಿದ್ದರಾದರೂ, 74 ರನ್ ಗಳಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. 

ಅನುಭವಿ ಬ್ಯಾಟ್ಸ್ ಮನ್ ಮೊಹ್ಮದುಲ್ಲಾ 39 ರನ್ ಗಳಿಸಿದ್ದ ಸಂದರ್ಭದಲ್ಲಿ ಗಾಯಗೊಂಡು ನಿವೃತ್ತಿ ಹೊಂದಿದ ಕಾರಣ ಬಾಂಗ್ಲಾದೇಶ ಒಬ್ಬ ಬ್ಯಾಟ್ಸ್ ಮನ್ ಕೊರೆತ ಅನುಭವಿಸಿತು. ಅಂತೆಯೇ ಅಲ್ ಅಮಿನ್ ಹುಸೇನ್ (21 ರನ್ ) ವಿಕೆಟ್ ಪತನದೊಂದಿಗೆ ಬಾಂಗ್ಲಾ ತನ್ನ 9ನೇ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆಯೇ ಭಾರತಕ್ಕೆ ಇನ್ನಿಂಗ್ಸ್  ಹಾಗೂ 46 ರನ್ ಗಳ ಜಯ ಪ್ರಾಪ್ತಿಯಾಗಿತ್ತು. ಈ ಮೂಲಕ ತವರಿನಲ್ಲಿ ಸತತ 12ನೇ ಟೆಸ್ಟ್ ಸರಣಿ ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಲಭ್ಯವಾದ ಸತತ 7ನೇ ಸರಣಿ ಜಯವಾಗಿದೆ.

ಪಂದ್ಯದ ಎರಡನೇ ದಿನ 9 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿಕೊಂಡಿದ್ದ ಭಾರತ ತಂಡ 241 ರನ್ ಗಳ ಮುನ್ನಡೆ ಗಳಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 106 ರನ್ ಗಳಿಗೆ ಆಲ್ ಔಟ್ ಆಗಿದ್ದ ಬಾಂಗ್ಲಾದೇಶ , 2ನೇ ಇನ್ನಿಂಗ್ಸ್ ನಲ್ಲಿ ಕೊಂಚ ಪ್ರತಿರೋಧವೊಡ್ಡಿತ್ತು. ಭಾರತದ ಪರ ಮೊದಲ ದಿನಾದಟದಲ್ಲಿ 5 ವಿಕೆಟ್ ಕಿತ್ತಿದ್ದ ವೇಗಿ ಇಶಾಂತ್ ಶರ್ಮಾ, ಎರಡನೇ ದಿನದಾಟದಲ್ಲೂ 4 ವಿಕೆಟ್ ಪಡೆದುಕೊಂಡರು. ಉಮೇಶ್ ಯಾದವ್ ಮೊದಲ ಇನ್ನಿಂಗ್ಸ್ ನಲ್ಲಿ 3 ಮತ್ತು 2ನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದುಕೊಂಡರು.

ಸರಣಿಯಲ್ಲಿ ಅದ್ಬುತ ಬೌಲಿಂಗ್ ಸಾಧನೆ ಮಾಡಿದ ಇಶಾಂತ್ ಶರ್ಮಾ ಅವರಿಗೆ ಪಂದ್ಯ ಹಾಗೂ ಸರಣಿ ಶ್ರೇಷ್ಠ ಗೌರವ ಪ್ರಾಪ್ತವಾಯಿತು.

SCROLL FOR NEXT