ಕ್ರಿಕೆಟ್

ಮಂಡಿ ಮೂಳೆ ಮುರಿದಿದ್ದರೂ ವಿಶ್ವಕಪ್ ನಲ್ಲಿ ಆಡಿದ್ದೆ: ಶಮಿ

Nagaraja AB

ನವದೆಹಲಿ: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಆತಿಥ್ಯದಲ್ಲಿ ನಡೆದ 2015ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಮಂಡಿ ಮೂಳೆ ಮುರಿದಿದ್ದರೂ ಎಲ್ಲ ಪಂದ್ಯಗಳನ್ನು ಆಡಿದ್ದಾಗಿ ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ ಇದೀಗ ಬಾಯ್ಬಿಟ್ಟಿದ್ದಾರೆ

"ವಿಶ್ವಕಪ್‌ 2015ರ ಟೂರ್ನಿಯಲ್ಲಿ ನನಗೆ ಮಂಡಿ ನೋವಿನ ಗಾಯದ ಸಮಸ್ಯೆ ಇತ್ತು. ಗಾಯದ ಸಮಸ್ಯೆ ನಡುವೆ ಟೂರ್ನಿಯ ಎಲ್ಲ ಪಂದ್ಯಗಳನ್ನು ಆಡಿದ ಬಳಿಕ ನನಗೆ ನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲ. ನಿತಿನ್‌ ಪಟೇಲ್‌ ಅವರು ತುಂಬಿದ್ದ ಆತ್ಮವಿಶ್ವಾಸದಿಂದ ನನಗೆ 2015 ವಿಶ್ವಕಪ್‌ನಲ್ಲಿ ಎಲ್ಲ ಪಂದ್ಯಗಳನ್ನು ಆಡಲು ಸಾಧ್ಯವಾಯಿತು," ಎಂದು ಶಮಿ ಹೇಳಿಕೊಂಡಿದ್ದಾರೆ.

"ಟೂರ್ನಿಯ ಮೊದಲ ಪಂದ್ಯದಲ್ಲೇ ನನ್ನ ಮಂಡಿ ಮೂಳೆ ಮುರಿದಿತ್ತು. ಊತದಿಂದಾಗಿ ನನ್ನ ತೊಡೆ ಮತ್ತು ಮಂಡಿ ಎರಡೂ ಒಂದೇ ಗಾತ್ರಕ್ಕೆ ಬಂದಿತ್ತು. ಪ್ರತಿ ದಿನ ನನ್ನ ಮಂಡಿಯಿಂದ ದ್ರವ ಪದಾರ್ಥವನ್ನು ವೈದ್ಯರು ತಗೆಯುತ್ತಿದ್ದರು. ಮೂರು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಿದ್ದೆ," ಎಂದು ಇರ್ಫಾನ್‌ ಪಠಾಣ್‌ ಅವರ ಜೊತೆಗೆ ಇನ್‌ಸ್ಟಾಗ್ರಾಮ್‌ ಲೈವ್‌ ಚಾಟ್‌ನಲ್ಲಿ ಮಾತನಾಡಿದ ಸಂದರ್ಭದಲ್ಲಿ ಶಮಿ ಹೇಳಿಕೊಂಡಿದ್ದಾರೆ.

ಆ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್‌ ತಲುಪಿತ್ತಾದರೂ, ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಸೋತು ಸ್ಪರ್ಧೆಯಿಂದ ಹೊರಬಿದ್ದಿತ್ತು.

SCROLL FOR NEXT