ಕ್ರಿಕೆಟ್

ಸಚಿನ್‌ಗೆ 47ನೇ ಜನ್ಮದಿನದ ಸಂಭ್ರಮ: ಕ್ರಿಕೆಟ್ ದೇವರ ಹೆಸರಿನಲ್ಲಿರುವ 3 ವಿಶೇಷ ದಾಖಲೆಗಳ ವಿವರ ನೋಡಿ

Raghavendra Adiga

ನವದೆಹಲಿ: ಕ್ರಿಕೆಟ್‌ ಇತಿಹಾಸದಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಹೆಸರು ಅಜರಾಮರ. ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್‌ಗಳ ವಿಶ್ವ ದಾಖಲೆಯ ಜೊತೆಗೆ ನೂರು ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ ವಿಶ್ವದ ಏಕಮಾತ್ರ ಬ್ಯಾಟ್ಸ್‌ಮನ್‌ ಸಚಿನ್‌.

ತಮ್ಮ 24 ವರ್ಷಗಳ ಸುದೀರ್ಘಾವಧಿಯ ವೃತ್ತಿ ಬದುಕಿನಲ್ಲಿ ಸಚಿನ್‌ ನೂರಾರು ದಾಖಲೆಗಳನ್ನು ಬರೆದಿದ್ದಾರೆ. ಈಗಲೂ ಅದೆಷ್ಟೋ ದಾಖಲೆಗಳು ಸಚಿನ್‌ ಹೆಸರಲ್ಲಿ ಅಚ್ಚಳಿಯದಂತೆ ಉಳಿದಿವೆ. ಹೀಗಾಗಿ ಅಭಿಮಾನಿಗಳ ಮನದಲ್ಲಿ ಕ್ರಿಕೆಟ್‌ ದೇವರು ಎಂದೇ ನೆಲೆಸಿದ್ದಾರೆ. ಅಂದಹಾಗೆ ಗಾಡ್‌ ಆಫ್‌ ಕ್ರಿಕೆಟ್‌ ಖ್ಯಾತಿಯ ದಿಗ್ಗಜ ಆಟಗಾರನಿಗೆ ಇಂದು 47ನೇ ಹುಟ್ಟು ಹಬ್ಬದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ಸಚಿನ್‌ ಹೆಸರಲ್ಲಿರುವ ವಿಶೇಷ ದಾಖಲೆಗಳನ್ನು ಅಭಿಮಾನಿಗಳು ತಿಳಿದುಕೊಳ್ಳಲೇ ಬೇಕು.

ಆ ಮೂರು ವಿಶೇಷ ದಾಖಲೆಗಳನ್ನು ಇಲ್ಲಿ ವಿವರಿಸಲಾಗಿದೆ. ಮಾಸ್ಟರ್‌ ಬ್ಲಾಸ್ಟರ್‌ ತೆಂಡೂಲ್ಕರ್ ದಾಖಲೆಗಳಲ್ಲಿನ ದಿ ಬೆಸ್ಟ್‌ ಅಂಕಿ ಅಂಶಗಳು ಇಲ್ಲಿವೆ ನೋಡಿ.

1. ತೆಂಡೂಲ್ಕರ್‌ ಹೆಸರಿನಲ್ಲಿರುವ ವಿಶೇಷ ಬೌಲಿಂಗ್‌ ದಾಖಲೆ

ಸಚಿನ್ ಬ್ಯಾಟಿಂಗ್‌ ಕಡೆಗೆ ಗಮನ ನೀಡದೇ ಹೋದದ್ದು ನಮ್ಮಂತ ಸ್ಪಿನ್ನರ್‌ಗಳಿಗೆ ಪೈಪೋಟಿ ಕಡಿಮೆಯಾಯಿತು ಎಂದು ಆಸ್ಟ್ರೇಲಿಯಾದ ಸ್ಪಿನ್‌ ದಿಗ್ಗಜ ಶೇನ್‌ ವಾರ್ನ್‌ ಅಭಿಪ್ರಾಯ ಪಟ್ಟಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000ರಕ್ಕೂ ಹೆಚ್ಚು ವಿಕೆಟ್‌ ಪಡೆದ ಖ್ಯಾತಿಯ ಲೆಗ್‌ ಸ್ಪಿನ್ನರ್‌ನಿಂದ ಇಂಥದ್ದೊಂದು ಮಾತು ಬರಬೇಕೆಂದರೆ ಅವರಿಗೆ ಸಚಿನ್‌ ಅವರೊಳಗಿದ್ದ ಅಪ್ರತಿಮ ಸ್ಪಿನ್ನರ್‌ನ ಪರಿಚಯವಾಗಿದೆ ಎಂದರ್ಥ. ವಿಶೇಷವೆಂದರೆ ಏಕದಿನ ಕ್ರಿಕೆಟ್‌ನಲ್ಲಿ ವಾರ್ನ್‌ಗಿಂತಲೂ ಹೆಚ್ಚು ಬಾರಿ 5 ವಿಕೆಟ್‌ ಪಡೆದ ಸಾಧನೆ ಮಾಡಿರುವುದು ತೆಂಡೂಲ್ಕರ್‌ ಅವರ ಕೀರ್ತಿಗಳಲ್ಲಿ ಒಂದು.

ತಮ್ಮ ಲೆಗ್‌ ಸ್ಪಿನ್‌ ಮೂಲಕ ಆಗಾಗ ಮಿಂಚು ಮೂಡಿಸಿರುವ ಸಚಿನ್‌, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಒಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 2 ಬಾರಿ 6ಕ್ಕೂ ಕಡಿಮೆ ರನ್‌ ಕಾಯ್ದುಕೊಳ್ಳುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟ ಅಪ್ರತಿಮ ಸಾಧನೆ ಮತ್ತು ವಿಶೇಷ ದಾಖಲೆ ತೆಂಡೂಲ್ಕರ್‌ ಹೆಸರಲ್ಲಿದೆ. 1993ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು 1997ರಲ್ಲಿ ಆಸ್ಟ್ರೇಲಿಯಾ ಎದುರು ಸಚಿನ್‌ ಅಂತಿಮ ಓವರ್‌ನಲ್ಲಿ 6ಕ್ಕೂ ಕಡಿಮೆ ರನ್‌ ನೀಡಿ ತಂಡಕ್ಕೆ ಜಯದ ಮಾಲೆ ತೊಡಿಸಿದ್ದರು.

2. ಸಿಕ್ಸರ್‌ ಬಾರಿಸುವ ಮೂಲಕ 6 ಟೆಸ್ಟ್‌ ಶತಕಗಳು

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಸಿಕ್ಸರ್‌ ಬಾರಿಸಿ 6 ಶತಕಗಳನ್ನು ದಾಖಲಿಸಿದ ವಿಶ್ವದ ಏಕಮಾತ್ರ ಬ್ಯಾಟ್ಸ್‌ಮನ್‌ ಎಂಬ ದಾಖಲೆ ತೆಂಡೂಲ್ಕರ್‌ ಅವರ ಹೆಸರಲ್ಲಿದೆ. 1994ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಟೆಸ್ಟ್‌ ಪಂದ್ಯದಲ್ಲಿ ಸಚಿನ್ ಮೊದಲ ಬಾರಿ ಸಿಕ್ಸರ್‌ ಬಾರಿಸುವ ಮೂಲಕ ಶತಕ ಗಳಿಸಿದ್ದರು. ಇದರ ಬಳಿಕ ಹಲವು ಬಾರಿ ಇದೇ ಸಾಧನೆ ಮಾಡಿದ್ದು, 2011ರಲ್ಲಿ ದಕ್ಷಿಣ ಆಫ್ರಿಕಾ ಎದುರು ಕೊನೆಯ ಬಾರಿ ಸಿಕ್ಸರ್‌ನೊಂದಿಗೆ ಟೆಸ್ಟ್ ಸೆಂಚುರಿ ಬಾರಿಸಿದ್ದರು.

3. ನರ್ವಸ್‌ 90 - ಅತಿ ಹೆಚ್ಚು ಬಾರಿ 90ರ ಗಡಿಯಲ್ಲಿ ಔಟ್‌

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿರುವ ಬ್ಯಾಟ್ಸ್‌ಮನ್‌ಗೆ 90ರ ಗಡಿಗೆ ಕಾಲಿಡುತ್ತಿದ್ದಂತೆಯೇ ಆತಂಕ ಆವರಿಸುತ್ತಿತ್ತು ಎಂದರೆ ಅಚ್ಚರಿಯಾಗಬಹುದು. ಹೌದು, ಸಚಿನ್‌ ಅತಿ ಹೆಚ್ಚು ಬಾರಿ 90ರ ಗಡಿಯೊಳಗೆ ಔಟ್‌ ಆಗುವ ಮೂಲಕ ಅದೆಷ್ಟೋ ಶತಕಗಳಿಂದ ವಂಚಿತರಾಗಿದ್ದಾರೆ. ನರ್ವಸ್‌ 90 ಪದ ಹುಟ್ಟಿಕೊಳ್ಳಲು ಕಾರಣವೇ ತೆಂಡೂಲ್ಕರ್‌ ಎಂಬುದು ವಿಶೇಷ. ಏಕದಿನ ಕ್ರಿಕೆಟ್‌ನಲ್ಲಿ ಅವರು ಬರೋಬ್ಬರಿ 17 ಬಾರಿ 90ರ ಗಡಿಯಲ್ಲಿ ಔಟ್‌ ಆಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಬಾರಿ ನರ್ವಸ್‌ 90ಗೆ ಬಲಿಯಾಗಿದ್ದಾರೆ.

SCROLL FOR NEXT