ಕ್ರಿಕೆಟ್

'ನಿಮ್ಮ ಸಾಧನೆ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ': ಪತಿಯ ಬಗ್ಗೆ ಸಾಕ್ಷಿ ಸಿಂಗ್ ಭಾವನಾತ್ಮಕ ನುಡಿ 

Sumana Upadhyaya

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹಠಾತ್ತನೆ ಹೇಳಿ ಎಂ.ಎಸ್ ಧೋನಿ ಲಕ್ಷಾಂತರ ಅಭಿಮಾನಿಗಳಿಗೆ ಅಚ್ಚರಿ ಮತ್ತು ಬೇಸರ ಮೂಡಿಸಿದ್ದಾರೆ. 

ನಿನ್ನೆ ಅವರು ನಿವೃತ್ತಿ ಘೋಷಿಸಿದ ನಂತರ ಹಲವು ಮಾಜಿ ಮತ್ತು ಇಂದಿನ ಕ್ರಿಕೆಟರ್ ಗಳು, ಸೆಲೆಬ್ರಿಟಿಗಳು, ಅವರ ಅಭಿಮಾನಿಗಳು ಧೋನಿಯವರ ಸಾಧನೆಗಳು, ಕೊಡುಗೆಗಳನ್ನು ಕೊಂಡಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ಸಾಕ್ಷಿ ಸಿಂಗ್ ಇನ್ಸ್ಟಾಗ್ರಾಂನಲ್ಲಿ ಕೈಮುಗಿದು ಹೃದಯದ ಎಮೊಜಿ ಹಾಕುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನಂತರ ಭಾವನಾತ್ಮಕ ಪೋಸ್ಟ್ ವೊಂದನ್ನು ಹಾಕಿದ್ದಾರೆ.

''ನಿಮ್ಮ ಸಾಧನೆ ಇಂದು ಮಾತನಾಡುತ್ತಿದೆ, ಅದಕ್ಕೆ ಸಿಕ್ಕಿರುವ ಪ್ರಶಂಸೆ, ಪ್ರೀತಿ ಕಂಡು ನಿಮಗೆ ಹೆಮ್ಮೆಯಾಗಬೇಕು. ನಿಮ್ಮ ಕೈಯಿಂದ ಸಾಧ್ಯವಾದಷ್ಟು ಉತ್ತಮ ಆಟವನ್ನು ದೇಶಕ್ಕೆ ನೀಡಿದ್ದಕ್ಕೆ ನಿಮಗೆ ಅಭಿನಂದನೆಗಳು, ನಿಮ್ಮ ಬಗ್ಗೆ ಹೆಮ್ಮೆಯೆನಿಸುತ್ತಿದೆ, ಕ್ರಿಕೆಟ್ ಗೆ ವಿದಾಯ ಹೇಳುತ್ತಿರುವ ಈ ಸಂದರ್ಭದಲ್ಲಿ ನೀವು ಕಣ್ಣೀರನ್ನು ಹಿಡಿದಿಟ್ಟುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ನಿಮಗೆ ಇನ್ನಷ್ಟು ಹೆಚ್ಚು ಸಂತೋಷ, ಆರೋಗ್ಯ ಮತ್ತು ಇನ್ನಷ್ಟು ಉತ್ತಮ ದಿನಗಳು ಬರಲಿ'' ಎಂದು ಧೋನಿಯವರು ಸೂರ್ಯಾಸ್ತಮಾನವನ್ನು ನೋಡುತ್ತಿರುವ ಚಿತ್ರವನ್ನು ಹಾಕಿ ಪೋಸ್ಟ್ ಮಾಡಿದ್ದಾರೆ.

ಜನರು ನೀವು ಏನು ಹೇಳಿದ್ದೀರಿ ಅದನ್ನು ಮರೆಯಬಹುದು, ನೀವು ಏನು ಮಾಡಿದ್ದೀರಿ ಅದನ್ನು ಮರೆಯಬಹುದು, ಆದರೆ ಅವರು ನಿಮ್ಮನ್ನು ಹೇಗೆ ಭಾವಿಸಿದ್ದಾರೆ ಎಂಬುದನ್ನು ಎಂದಿಗೂ ಮರೆಯುವುದಿಲ್ಲ ಎಂದು ಸಾಕ್ಷಿ ಒಂದು ಉಲ್ಲೇಖವನ್ನು ಬಳಸಿದ್ದಾರೆ.

ಟೆಸ್ಟ್ ಕ್ರಿಕೆಟ್ ಗೆ 2014ರಲ್ಲಿ ವಿದಾಯ ಹೇಳಿದ್ದ ಎಂ ಎಸ್ ಧೋನಿ ನಿನ್ನೆ ಅಂತಾರಾಷ್ಟ್ರೀಯ ಮತ್ತು ಟಿ20 ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ. ಭಾರತದ ಕ್ರಿಕೆಟ್ ತಂಡದ ನಾಯಕರಾಗಿ 350 ಏಕ ದಿನ ಅಂತಾರಾಷ್ಟ್ರೀಯ ಪಂದ್ಯ ಮತ್ತು 98 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 

SCROLL FOR NEXT