ಕ್ರಿಕೆಟ್

ಪಾರ್ಥೀವ್ ಪಟೇಲ್ ನಿವೃತ್ತಿ ಘೋಷಣೆ; ಎಲ್ಲ ಮಾದರಿ ಕ್ರಿಕೆಟ್ ಗೆ ವಿದಾಯ

Srinivasamurthy VN

ನವದೆಹಲಿ: ಭಾರತೀಯ ಕ್ರಿಕಟಿಗ ಹಾಗೂ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್, ಬುಧವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 

ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ 35ರ ಹರೆಯದ ಪಾರ್ಥಿವ್ ಪಟೇಲ್, 18 ವರ್ಷಗಳ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಘೋಷಿಸುವುದಾಗಿ ತಿಳಿಸಿದ್ದಾರೆ. ಅಂತೆಯೇ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ತಮಗೆ ನೇರವಾಗಿ ಮತ್ತು ಪರೋಕ್ಷವಾಗಿ ನೆರವಾದ ಎಲ್ಲರಿಗೂ ಧನ್ಯವಾದ ಹೇಳುವುದಾಗಿ ಪಾರ್ಥೀವ್  ಪಟೇಲ್ ಹೇಳಿದ್ದಾರೆ.

ಪಾರ್ಥಿವ್ ಪಟೇಲ್ 25 ಟೆಸ್ಟ್, 38 ಏಕದಿನ ಹಾಗೂ ಎರಡು ಟ್ವೆಂಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ ಟೆಸ್ಟ್ ಹಾಗೂ ಏಕದಿನದಲ್ಲಿ ಅನುಕ್ರಮವಾಗಿ ಆರು ಹಾಗೂ ನಾಲ್ಕು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೊನೆಯದಾಗಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. 

ಪಾರ್ಥೀವ್ ಹೆಜ್ಜೆ ಗುರುತು!
ಮ್ಯಾಚ್ ಫಿಕ್ಸಿಂಗ್ ಕರಾಳ ಅಧ್ಯಾಯದ ಬಳಿಕ 2000ನೇ ಕಾಲಘಟ್ಟದಲ್ಲಿ ಟೀಮ್ ಇಂಡಿಯಾ ನೂತನ ವಿಕೆಟ್ ಕೀಪರ್ ಹುಡುಕಾಟದಲ್ಲಿತ್ತು. 17ರ ಪೋರ ಪಾರ್ಥಿವ್ ಪಟೇಲ್ ಅಂದಿನ ನಾಯಕ ಸೌರವ್ ಗಂಗೂಲಿ ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. ಸೌರವ್ ಗಂಗೂಲಿ ಗರಡಿಯಲ್ಲಿ ಪಳಗಿದ ಗುಜರಾತ್  ಮೂಲದ ಪಾರ್ಥಿವ್ ಪಟೇಲ್ ಪರಿಪೂರ್ಣ ವಿಕೆಟ್ ಕೀಪರ್ ಆಗಿ ಹೊರಹೊಮ್ಮಿದರು. 

2002ನೇ ಇಸವಿಯ ಆಗಸ್ಟ್ 8ರಂದು ತಮ್ಮ 17ರ ಹರೆಯದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ಕಾಲಿರಿಸಿದ ಪಾರ್ಥಿವ್ ಪಟೇಲ್ ದಾಖಲೆ ಬರೆದರು. ಅಲ್ಲದೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತಿ ಕಿರಿಯ ವಿಕೆಟ್ ಕೀಪರ್ ಎನಿಸಿದರು. ಬಳಿಕ 2003 ಜೂನ್ 4ರಂದು ಏಕದಿನ ಕ್ರಿಕೆಟ್‌ಗೂ ಕಾಲಿರಿಸಿದರು.  2003ನೇ  ಇಸವಿಯಲ್ಲಿ ಹೈ ಸ್ಕೂಲ್ ಬೋರ್ಡ್ ಪರೀಕ್ಷೆಯನ್ನು ಮಿಸ್ ಮಾಡಿದ ಪಾರ್ಥಿವ್ ಪಟೇಲ್ ವಿಶ್ವಕಪ್‌ಗಾಗಿ ದಕ್ಷಿಣ ಆಫ್ರಿಕಾ ವಿಮಾನವೇರಿದರು. ಆಸೀಸ್ ಪ್ರವಾಸದಲ್ಲಂತೂ ಬ್ರೆಟ್ ಲೀ ಅಂಥ ಮಾರಕ ಬೌನ್ಸರ್ ದಾಳಿಯನ್ನು ಎದುರಿಸಿ ಮುದ್ದು ಮುಖದ ಪಾರ್ಥಿವ್ ಪಟೇಲ್ ಎಲ್ಲರ ಪ್ರೀತಿಗೆ ಪಾತ್ರವಾದರು.  ಈ ಮಧ್ಯೆ  ಮಹೇಂದ್ರ ಸಿಂಗ್ ಧೋನಿ ಹಾಗೂ ದಿನೇಶ್ ಕಾರ್ತಿಕ್ ಅವರಂತಹ ಮಹಾನ್ ವಿಕೆಟ್ ಕೀಪರ್‌ಗಳ ಆಗಮನದೊಂದಿಗೆ ಪಾರ್ಥಿವ್ ಪಟೇಲ್ ನಿಧಾನವಾಗಿ ಅವಕಾಶ ವಂಚಿತರಾದರು.

SCROLL FOR NEXT