ಕ್ರಿಕೆಟ್

ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಸಾಧಿಸಲು ಟೀಂ ಇಂಡಿಯಾಗೆ ಇನ್ನೂ ಅವಕಾಶವಿದೆ: ಡ್ಯಾರೆನ್ ಲೆಹ್ಮನ್

Vishwanath S

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಮೊದಲ ಟೆಸ್ಟ್ ನಲ್ಲಿ ಹೀನಾಯವಾಗಿ ಸೋಲು ಕಂಡ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ. 

ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಭವಿ ವೇಗಿ ಮೊಹಮದ್ ಶಮಿ ಮುಂದಿನ ಪಂದ್ಯಗಳಿಗೆ ಅಲಭ್ಯವಾಗಿದ್ದಾರೆ. ಆದರೆ ಸದ್ಯ ಆಸ್ಟ್ರೇಲಿಯಾ ತಂಡಕ್ಕೆ ಪೂರಕವಾಗಿರುವಂತಹ ವಾತಾವರಣವನ್ನು ತನ್ನತ್ತ ತಿರುಗಿಸಿಕೊಳ್ಳಲು ಭಾರತ ತಂಡಕ್ಕೆ ಇನ್ನೂ ಉತ್ತಮ ಅವಕಾಶವಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಕೋಚ್ ಡ್ಯಾರೆನ್ ಲೆಹ್ಮನ್ ಹೇಳಿದ್ದಾರೆ.

ಈಗ ಭಾರತೀಯ ತಂಡಕ್ಕೆ ಕಠಿಣವಾದ ಸಂದರ್ಭ. ಆದರೆ ಪರಿಸ್ಥಿತಿಯನ್ನು ತನಗೆ ಪೂರಕವಾಗಿರುವಂತೆ ತಿರುಗಿಸಿಕೊಳ್ಳಲು ಅವರಲ್ಲಿ ಕೆಲ ಉತ್ತಮ ದರ್ಜೆಯ ಆಟಗಾರರು ಇದ್ದಾರೆ ಎಂದು ಡ್ಯಾರನ್ ಲೆಹ್ಮನ್ ಟೀಮ್ ಇಂಡಿಯಾವನ್ನು ಉದ್ದೇಶಿಸಿ ಹೇಳಿಕೆಯನ್ನು ನೀಡಿದ್ದಾರೆ.

ಭಾರತ ತಂಡ ಪ್ರಬಲ ಬೌಲಿಂಗ್ ದಾಳಿಯನ್ನು ಹೊಂದಿದೆ ಇದರ ಜೊತೆಗೆ ಅವರ ಬ್ಯಾಟ್ಸ್ ಮನ್ ಗಳು ಬೌನ್ಸ್ ಅನ್ನು ಚೆನ್ನಾಗಿ ನಿಭಾಯಿಸಲು ಯಶಸ್ವಿಯಾದರೆ ಪ್ರವಾಸಿಗರು ಸರಣಿಯಲ್ಲಿ ಪುನರಾಗಮನವನ್ನು ಮಾಡಬಹುದು ಎಂದು 50ರ ಹರೆಯದ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ ಮನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಮೆಲ್ಬರ್ನ್ ಪಿಚ್ ಫ್ಲ್ಯಾಟ್ ಇರುವ ಕಾರಣ ಅದರ ಲಾಭ ಭಾರತೀಯ ಬ್ಯಾಟ್ಸ್ ಮನ್ ಗಳಿಗೆ ಆಗಬಹುದು ಎಂದಿದ್ದಾರೆ. ಮೆಲ್ಬರ್ನ್ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳು ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಅವರು ಹೊಂದಿಕೊಂಡು ರನ್ ಗಳಿಸಲು ಸಮರ್ಥರಾದರೆ, ಅವರ ಪಾಲಿಗೆ ಅದು ಪ್ರಮುಖ ಸಂಗತಿಯಾಗಲಿದೆ ಎಂದಿದ್ದಾರೆ ಡ್ಯಾರೆನ್ ಲೆಹ್ಮನ್.

SCROLL FOR NEXT