ಕ್ರಿಕೆಟ್

ಹಿನ್ನೋಟ 2020: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ಇದು ಮರೆಯಬೇಕಾದ ವರ್ಷ!

Vishwanath S

ನವದೆಹಲಿ: 2020 ಅಂಕಿಸಂಖ್ಯೆ ಮೂಲಕ ಸುಲಭವಾಗಿ ನೆನಪಿನಲ್ಲಿ ಉಳಿಯಬೇಕಾದ ವರ್ಷವಾಗಬೇಗಿತ್ತು. ಆದರೆ ಜನರು ಮಾತ್ರ ಇದು ನೆನಪಿನ ಅಂಗಳದಲ್ಲಿ ಇಷ್ಟುಕೊಳ್ಳಲು ಬಯಸದ ವರ್ಷವಾಗಿ ಬಿಟ್ಟಿದೆ. ಅದಕ್ಕೆ ಕಾರಣ ಕೊರೋನಾ. ಹೌದು ವರ್ಷದ ಆರಂಭದಲ್ಲೇ ಕೊರೋನಾ ಮಹಾಮಾರಿ ವಕ್ಕರಿಸಿದ್ದರಿಂದ ಮೂಕ್ಕಾಲು ವರ್ಷ ಲಾಕ್ ಡೌನ್ ನಲ್ಲೇ ಮುಗಿದುಹೋಯಿತು. 

ಇನ್ನು ಕ್ರೀಡೆಗಳ ವಿಷಯಕ್ಕೆ ಬಂದರೂ ಸಹ ಅಲ್ಲಿಯೂ ಯಾವುದೇ ದೊಡ್ಡ ಮಟ್ಟದ ಟೂರ್ನಿಗಳು ನಡೆಯಲಿಲ್ಲ. ಐಪಿಎಲ್ ನಡೆಯಿತ್ತಾದೂ ಅದೂ ಸಹ ನಿರ್ದಿಷ್ಠ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ನಡೆದೆ ಹೋಯಿತು.

ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ಹೆಚ್ಚಿನ ಸದಸ್ಯರು ಸಹ ಈ ವರ್ಷವನ್ನು ವಿಭಿನ್ನ ಕಾರಣಗಳಿಗಾಗಿ ಪ್ರೀತಿಯಿಂದ ನೋಡುವುದಿಲ್ಲ. ಇನ್ನು ಕ್ರಿಕೆಟ್ ಕ್ರೇಜಿ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳ ನಿರೀಕ್ಷೆಗಳು ಪೂರೈಸಲೇ ಇಲ್ಲ. ಇದರ ಮಧ್ಯೆ ಇತ್ತೀಚೆಗೆ ಅಡಿಲೇಡ್ ಓವಲ್‌ನಲ್ಲಿ ಆಸೀಸ್ ವಿರುದ್ಧ ವಿರಾಟ್ ಕೊಹ್ಲಿ ಪಡೆಯ ಹೀನಾಯ ಸೋಲು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗಾಯಕ್ಕೆ ಉಪ್ಪನ್ನು ಉಜ್ಜಿದಂತಾಗಿತ್ತು. 

2020ರಲ್ಲಿ ಟೀಂ ಇಂಡಿಯಾ ಪುರುಷರ ತಂಡವು ಒಟ್ಟು 23 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಮೂರು ಟೆಸ್ಟ್, 11 ಟಿ20, 9 ಏಕದಿನ ಪಂದ್ಯಗಳನ್ನು ಆಡಿತ್ತು. ಆಡಿದ್ದ ಮೂರು ಟೆಸ್ಟ್ ಪಂದ್ಯಗಳನ್ನು ಭಾರತ ಸೋತಿದೆ. ಇನ್ನು ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 26ರಿಂದ ಮೆಲ್ಬೋರ್ನ್‌ನಲ್ಲಿ ಈ ವರ್ಷದ ಕೊನೆಯ ಒಂದು ಟೆಸ್ಟ್ ಪಂದ್ಯ ನಡೆಯಲಿದೆ. ಇದನ್ನು ಹೊರತು ಪಡಿಸಿದರೆ 10 ಟಿ20 ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಗೆಲುವುಗಳನ್ನು ದಾಖಲಿಸಿದೆ. ಎಲ್ಲವೂ ಆಸ್ಟ್ರೇಲಿಯಾ ವಿರುದ್ಧ.

11 ಟಿ20 ಪಂದ್ಯಗಳಲ್ಲಿ ಒಂದನ್ನು ಮಾತ್ರ ಕಳೆದುಕೊಂಡಿರುವುದು ಶ್ಲಾಘನೀಯ. ಮೂಲತಃ ನಿಗದಿಪಡಿಸಿದಂತೆ ಈ ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್ ನಡೆದಿದ್ದರೆ ಈ ಪ್ರದರ್ಶನವನ್ನು ಉತ್ತಮ ತಯಾರಿ ಎಂದು ಪರಿಗಣಿಸಲಾಗುತ್ತಿತ್ತು. ಸಾಂಕ್ರಾಮಿಕ ರೋಗದಿಂದಾಗಿ ವಿಶ್ವಕಪ್ ಅನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಇನ್ನುಳಿದಂತೆ ಟೆಸ್ಟ್ ಮತ್ತು ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸಾಧನೆ ಕಳಪೆಯಾಗಿದೆ. ಟೀಂ ಇಂಡಿಯಾ ಆಡಿದ 9 ಏಕದಿನ ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಸೋತಿದೆ. ಇನ್ನು ಟೆಸ್ಟ್ ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ದಾಖಲಿಸದೆ ಪ್ರಸ್ತುತ ಐಸಿಸಿ ಶ್ರೇಯಾಂಕ ಮತ್ತು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಕಳೆದುಕೊಂಡಿದೆ. 

ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಆಟಗಾರರ ಸ್ಕೋರ್ ಹೀಗಿತ್ತು: 4, 9, 2, 0, 4, 0, 8, 4, 0, 4, 1, ಇದು ಅತ್ಯಂತ ಕೆಟ್ಟ ಬ್ಯಾಟಿಂಗ್ ಪ್ರದರ್ಶನವಾಗಿದೆ. ಟೀಂ ಇಂಡಿಯಾದ ಇತಿಹಾಸದಲ್ಲೇ ಇಂತಹ ಕೆಟ್ಟ ಪ್ರದರ್ಶನವನ್ನು ತಂಡ ನೀಡಿರಲಿಲ್ಲ. 

ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹೇಗೆ ಪ್ರದರ್ಶನ ನೀಡಿತು?
ಟೀಂ ಇಂಡಿಯಾ ಮಹಿಳಾ ತಂಡ ಒಟ್ಟು 11 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿತ್ತು. ಎಲ್ಲಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳು. ಈ ಪೈಕಿ ಮಹಿಳಾ ತಂಡ ಎಂಟು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಸಂಖ್ಯೆಗಳ ಪ್ರಕಾರ, ಭಾರತೀಯ ತಂಡದ ಸಾಧನೆ ಹೆಚ್ಚು ಪ್ರಭಾವಶಾಲಿಯಾಗಿದೆ.

ಆದಾಗ್ಯೂ, ಸೋತಿರುವ ಮೂರು ಪಂದ್ಯಗಳ ಪೈಕಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಮಾರ್ಚ್ 8ರಂದು ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ಸಹ ಒಂದಾಗಿದೆ. 

ಈ ಸೋಲಿನ ಮೂಲಕ ಭಾರತ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ಪಡೆಯುವಲ್ಲಿ ವಿಫಲವಾಗಿದೆ. ಈ ಪಂದ್ಯ ಮಹಿಳೆಯರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

SCROLL FOR NEXT