ಕ್ರಿಕೆಟ್

ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 8 ವಿಕೆಟ್ ಭರ್ಜರಿ ಗೆಲುವು

Nagaraja AB

ಮೇಲ್ಬರ್ನ್: ಇಲ್ಲಿನ ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ  ಇಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ 8 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿದೆ. 

ನಾಲ್ಕನೇ ದಿನದಾಟದ ಅಂತಿಮ ಇನ್ನಿಂಗ್ಸ್ ನಲ್ಲಿ 70 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತಕ್ಕೆ ಆರಂಭದಲ್ಲೇ ಮಯಾಂಕ್ ಅಗರ್ ವಾಲ್ (5) ಮತ್ತು ಚೇತೇಶ್ವರ ಪೂಜಾರ (3) ರನ್ ಗಳಿಗೆ ಓಟ್ ಆಗುವ ಮೂಲಕ ಆರಂಭಿಕ ಆಘಾತ ಎದುರಾಗಿತ್ತು. ಆದರೆ, ಯುವ  ಬ್ಯಾಟ್ಸ್ ಮನ್ ಶುಭ್ಮನ್ ಗಿಲ್  35 ಮತ್ತು ನಾಯಕ ಅಜಿಂಕ್ಯ ರಹಾನೆ  27 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. 15.5 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಭಾರತ ಗೆಲುವು ದಾಖಲಿಸಿತು.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡವನ್ನು 200 ರನ್ ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿತ್ತು. ಆರನೇ ಕ್ರಮಾಂಕದಲ್ಲಿ ಆಡಿದ ಕ್ಯಾಮರೂನ್ ಗ್ರೀನ್ 45 ರನ್ ಗಳಿಸಿ ಆಸ್ಟ್ರೇಲಿಯಾ ಪರ ಹೆಚ್ಚಿನ ರನ್ ಪಡೆದರೆ, ಮ್ಯಾಥ್ಯೂ ವಾಡೆ 40ರನ್ ಗಳಿಸಿದರು. ಗ್ರೀನ್ ಮತ್ತು ಪ್ಯಾಟ್ ಪ್ಯಾಟ್ ಕಮ್ಮಿನ್ಸ್ ಏಳನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಗಳಿಸಿದರು. ಹೊಸ ಬಾಲ್ ತೆಗೆದುಕೊಂಡ ನಂತರ ಈ ಜೋಡಿ ಬೇರ್ಪಟ್ಟಿತು. 

ಭಾರತ ಪರ ವೇಗಿ ಮೊಹಮ್ಮದ್ ಸಿರಾಜ್ 37 ರನ್ ಗಳಿಗೆ ಮೂರು ವಿಕೆಟ್ ಪಡೆದರೆ, ಜಸ್ಪ್ರೀತ್ ಬೂಮ್ರಾ 54ಕ್ಕೆ ಎರಡು, ರವೀಂದ್ರ ಜಡೇಜಾ 28ಕ್ಕೆ ಎರಡು ಮತ್ತು ಆರ್ ಅಶ್ವಿನ್ 71ಕ್ಕೆ 2 ವಿಕೆಟ್ ಕಬಳಿಸಿದರು. 

ಮೆಲ್ಬರ್ನ್ ಅಂಗಳದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾಂತ್ ಮತ್ತು ಶಮಿ ಇಲ್ಲದಿದ್ದರೂ ಅದ್ಬುತ ಸಾಧನೆ ಮಾಡಿರುವ ಟೀಂ ಇಂಡಿಯಾ ಸಾಧನೆಯನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಉಭಯ ತಂಡಗಳ ಮೂರನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಜನವರಿ 7ರಿಂದ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ- ಮೊದಲ ಇನಿಂಗ್ಸ್ 195
ಭಾರತ - ಮೊದಲ ಇನಿಂಗ್ಸ್ 325
ಆಸ್ಟ್ರೇಲಿಯಾ - ದ್ವಿತೀಯ ಇನಿಂಗ್ಸ್ 103.1 ಓವರ್ ಗಳಲ್ಲಿ 200 (ಮ್ಯಾಥ್ಯೂ ವೇಡ್ 40, ಲಾಬುಶೇನ್ 28, ಕ್ಯಾಮೆರನ್ ಗ್ರೀನ್ 45; ಮೊಹಮ್ಮದ್ ಸಿರಾಜ್ 37ಕ್ಕೆ 3, ರವೀಂದ್ರ ಜಡೇಜಾ 28ಕ್ಕೆ 3, ಬುಮ್ರಾ 54ಕ್ಕೆ 2, ಅಶ್ವಿನ್ 71ಕ್ಕೆ 2).
ಭಾರತ - ದ್ವಿತೀಯ ಇನಿಂಗ್ಸ್ 15.5 ಓವರ್ ಗಳಲ್ಲಿ 2 ವಿಕೆಟ್ ಗೆ 70 (ಶುಬ್ಮನ್ ಗಿಲ್ ಅಜೇಯ 35, ರಹಾನೆ ಅಜೇಯ 27).

SCROLL FOR NEXT