ಕ್ರಿಕೆಟ್

2ನೇ ಏಕದಿನ: ಕಿವೀಸ್ ವಿರುದ್ಧ ಭಾರತಕ್ಕೆ 22 ರನ್ ಗಳ ಸೋಲು, ಸರಣಿ ನ್ಯೂಜಿಲೆಂಡ್ ಕೈ ವಶ

Srinivasamurthy VN

ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 22 ರನ್ ಗಳ ಅಂತರದಲ್ಲಿ ಮುಗ್ಗರಿಸಿದ್ದು, 3 ಪಂದ್ಯಗಳ ಏಕದಿನ ಸರಣಿ ನ್ಯೂಜಿಲೆಂಡ್ ಕೈವಶವಾಗಿದೆ.

ಆಕ್ಲೆಂಡ್ ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 274ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ 48.3 ಓವರ್ ನಲ್ಲಿ 251 ರನ್ ಗಳಿ ಆಲೌಟ್ ಆಯಿತು. ಆ ಮೂಲಕ 22 ರನ್ ಗಳ ಅಂತರದಲ್ಲಿ ಕಿವೀಸ್ ವಿರುದ್ಧ ಸೋಲು ಕಂಡಿದೆ. ಅಂತೆಯೇ 3 ಪಂದ್ಯಗಳ ಏಕದಿನ ಸರಣಿಯನ್ನೂ 2-0 ಅಂತರದಲ್ಲಿ ಸೋತಿದೆ.

ವ್ಯರ್ಥವಾಯ್ತು ನವದೀಪ್ ಸೈನಿ-ರವೀಂದ್ರ ಜಡೇಜಾ ಹೋರಾಟ
ಇನ್ನು ನ್ಯೂಜಿಲೆಂಡ್ ನೀಡಿದ್ದ 274ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಭಾರತ ತಂಡ ಆರಂಭಿಕ ಆಘಾತ ಎದುರಿಸಿತ್ತು. ಆರಂಭಕರಾದ ಮಯಾಂಕ್ ಅಗರ್ವಾಲ್ ಕೇವಲ 3 ರನ್ ಗಳಿಗೆ ಔಟ್ ಆದರೆ, ಮತ್ತೋರ್ವ ಆಟಗಾರ ಪೃಥ್ವಿ ಶಾ 24 ರನ್ ಗಳಿಸಿ ಔಟ್ ಆದರು. ಆ ಬಳಿಕ ಬಂದ ನಾಯಕ ಕೊಹ್ಲಿ ಕೂಡ ಕೇವಲ 15 ರನ್ ಗಳಿಸಿ ಸೌಥಿ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಈ ಹಂತದಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಅರ್ಧಶತಕ ಸಿಡಿಸಿ ಭಾರತ ತಂಡವನ್ನು ಆಘಾತದಿಂದ ಮೇಲೆತ್ತಲು ಯತ್ನಿಸಿದರು.

ಆದರೆ ಅವರಿಗೆ ಉಳಿದ ಆಟಗಾರರಿಂದ ಉತ್ತಮ ಸಾಥ್ ದೊರೆಯಲಿಲ್ಲ. ನ್ಯೂಜಿಲೆಂಡ್ ಸರಣಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್ ಇಂದಿನ ಪಂದ್ಯದಲ್ಲಿ ಕೇವಲ 4 ರನ್ ಗಳಿಗೇ ಔಟ್ ಆಗಿದ್ದು ಭಾರತಕ್ಕೆ ಮಾರಕವಾಗಿ ಪರಿಣಮಿಸಿತು. ಬಳಿಕ ಕೇದಾರ್ ಜಾದವ್ ಕೂಡ 9 ರನ್ ಗೆ ಔಟಾದರು. ಆದರೆ ಬಳಿಕ ಬಂದ ರವೀಂದ್ರ ಜಡೇಜಾ ತಂಡವನ್ನು ಸೋಲಿನ ದವಡೆಯಿಂದ ಮೇಲೆತ್ತುವ ಪ್ರಯತ್ನ ಪಟ್ಟರು. ಜಡೇಜಾಗೆ ಸೈನಿ ಉತ್ತಮ ಸಾಥ್ ನೀಡಿದರು. ಈ ಜೋಡಿ 83 ಎಸೆತಗಳಲ್ಲಿ 76ರನ್ ಗಳ ಅಮೂಲ್ಯ ಕಾಣಿಕೆ ನೀಡಿತು. 

ಈ ಹಂತದಲ್ಲಿ 45 ರನ್ ಗಳಿಸಿದ್ದ ಸೈನಿ ಔಟ್ ಆದರು. ಬಳಿಕ ಬಂದ ಚಹಲ್ 10 ರನ್ ಗಳಿಸಿ ಔಟಾದರೆ, ಅಂತಿಮವಾಗಿ 55 ರನ್ ಗಳಿಸಿದ್ದ ರವೀಂದ್ರ ಜಡೇಜಾ ಔಟಾಗುವುದರೊಂದಿಗೆ ಭಾರತದ ಗೆಲುವಿನ ಕನಸು ಕಮರಿತು. ಅಂತಿಮವಾಗಿ ಭಾರತ ತಂಡ 48.3 ಓವರ್ ನಲ್ಲಿ 251 ರನ್ ಗಳಿ ಆಲೌಟ್ ಆಗಿ 22 ರನ್ ಗಳ ಅಂತರದಲ್ಲಿ ಕಿವೀಸ್ ಗೆ ಶರಣಾಯಿತು. ಅಂತೆಯೇ 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಕಳೆದುಕೊಂಡಿದೆ.

ಕಿವೀಸ್ ಪರ ಬೆನೆಟ್, ಟಿಮ್ ಸೌಥಿ, ಜೇಮೀಸನ್ ಮತ್ತು ಗ್ರಾಂಡ್ ಹೋಮ್ ತಲಾ 2 ವಿಕೆಟ್ ಪಡೆದರೆ, ನೀಶಮ್ 1 ವಿಕೆಟ್ ಪಡೆದರು.

SCROLL FOR NEXT