ಕ್ರಿಕೆಟ್

ಅಂಡರ್ 19 ವಿಶ್ವಕಪ್ ಫೈನಲ್: ಟಿವಿಗೆ ಅಂಟಿಕೊಂಡಿದ್ದ ಕೋಚ್ ರವಿಶಾಸ್ತ್ರಿ, ಟೀಂ ಇಂಡಿಯಾ ಆಟಗಾರರು!

Srinivasamurthy VN

ಆಕ್ಲೆಂಡ್: ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರು ಮತ್ತು ಕೋಚ್ ರವಿಶಾಸ್ತ್ರಿ ಭಾನುವಾರ ಅಕ್ಷರಶಃ ಟಿವಿಗೆ ಅಂಟಿಕೊಂಡಿದ್ದರು. ಇದಕ್ಕೆ ಕಾರಣ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯ..

ಹೌದು.. ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾ ಆಟಗಾರರು ಮತ್ತು ಕೋಚ್ ರವಿಶಾಸ್ತ್ರಿ ಭಾನುವಾರದ ತರಬೇತಿಗೆ ಬ್ರೇಕ್ ಹಾಕಿ ಟಿವಿ ಮುಂದೆ ಕುಳಿತಿದ್ದರು. ನಿನ್ನೆ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಪಂದ್ಯದುದ್ದಕ್ಕೂ ಟೀಂ ಇಂಡಿಯಾ ಆಟಗಾರರಿಗೆ ಬೆಂಬಲ ನೀಡುತ್ತಿದ್ದ ಆಟಗಾರರು, ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲೂ ಭಾರತದ ಯುವ ಪ್ರತಿಭೆಗಳಿಗೆ Go #BoysInBlue ಹ್ಯಾಶ್ ಟ್ಯಾಗ್ ಮೂಲಕ ಶುಭ ಕೋರಿದರು.

ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ ಕೇವಲ 177 ರನ್ ಕಲೆ ಹಾಕಿತು. ಇದನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ನಿಧಾನಗತಿಯಲ್ಲೇ ಉತ್ತಮ ರನ್ ಕಲೆ ಹಾಕಿತು. ಈ ಹಂತದಲ್ಲಿ ಮಳೆ ಅಡ್ಡಿ ಪಡಿಸಿದ್ದರಿಂದ ಡಕ್ವರ್ತ್ ಲೂಯಿಸ್ ನಿಯಮದನ್ವಯ ಬಾಂಗ್ಲಾದೇಶಕ್ಕೆ ಗೆಲುವಿನ ಗುರಿಯನ್ನು ಪರಿಷ್ಕರಿಸಲಾಯಿತು. ಆಗ ಬಾಂಗ್ಲಾದೇಶಕ್ಕೆ 46 ಓವರ್ ನಲ್ಲಿ ಗೆಲ್ಲಲು 170ರನ್ ಗಳ ಟಾರ್ಗೆಟ್ ನಿಗದಿ ಪಡಿಸಲಾಯಿತು. ಈ ಮೊತ್ತವನ್ನು ಬಾಂಗ್ಲಾದೇಶ ಕೇವಲ 42.1 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ ಮುಟ್ಟಿ ಚೊಚ್ಚಲ ವಿಶ್ವಕಪ್ ಅನ್ನು ತನ್ನ ಮುಡಿಗೇರಿಸಿಕೊಂಡಿತು.

SCROLL FOR NEXT