ಕ್ರಿಕೆಟ್

ಕ್ರಿಕೆಟ್ ಈಗ ಜಂಟಲ್ ಮನ್ ಗೇಮ್ ಆಗಿ ಉಳಿದಿಲ್ಲ: ಕಪಿಲ್ ದೇವ್ ವಿಷಾದ

Srinivasamurthy VN

ಮುಂಬೈ: ಅಂಡರ್ 19 ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿನ ಆಟಗಾರರ ನಡುವಿನ ಗಲಾಟೆ ಕುರಿತು ವಿಷಾದ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕ್ರಿಕೆಟ್ ಜಂಟಲ್ ಮನ್ ಗೇಮ್ ಆಗಿ ಉಳಿದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿರುವ ಕಪಿಲ್ ದೇವ್, ಅಂಡರ್ 19 ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿನ ಆಟಗಾರರ ನಡುವಿನ ಗಲಾಟೆ ನಿಜಕ್ಕೂ ಭಯಾನಕವಾದದ್ದು. ಕ್ರಿಕೆಟ್ ಈಗ ಜಂಟಲ್ ಮನ್ ಗೇಮ್ ಆಗಿ ಉಳಿದಿಲ್ಲ. ಯುವ ಕ್ರಿಕೆಟಿಗರ ನಡುವೆ ಏನಾಯಿತೋ ನನಗೆ ಗೊತ್ತಿಲ್ಲ. ಆದರೆ ಅಲ್ಲಿ ನಡೆದದ್ದು ಮಾತ್ರ ಭಯಾನಕ. ಕ್ರಿಕೆಟ್ ಮಂಡಳಿಗಳು, ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಯುವ ಕ್ರಿಕೆಟಿಗರು ಇಂತಹವುಗಳಿಂದ ದೂರ ಉಳಿಯಬೇಕು. ಪಂದ್ಯ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ. ಇಂತಹ ಘಟನೆಗಳಿಗೆ ತಂಡದ ನಾಯಕ, ಮ್ಯಾನೇಜರ್ ಮತ್ತು ಡಗೌಟ್ ನಲ್ಲಿ ಕುಳಿತಿರುವವರೂ ಕೂಡ ನೇರವಾಗಿ ಮತ್ತು ಪರೋಕ್ಷವಾಗಿ ಕಾರಣೀಕರ್ತರಾಗುತ್ತಾರೆ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದ ಬಾಂಗ್ಲಾದೇಶ ಯುವ ಆಟಗಾರರು ಗೆಲುವಿನ ಬಳಿಕ ಮೈದಾನದಲ್ಲಿ ಅಕ್ಷರಶಃ ದಾಂಧಲೆ ಸೃಷ್ಟಿಸಿದ್ದರು. ಗೆಲುವು ಸಾಧಿಸುತ್ತಲೇ ಮೈದಾನಕ್ಕೆ ನುಗ್ಗಿದ ಆಟಗಾರರು ಭಾರತದ ಯುವ ಆಟಗಾರರನ್ನು ಕಿಚಾಸಿದ್ದು ಮಾತ್ರವಲ್ಲದೇ ಗಲಾಟೆ ಸೃಷ್ಟಿಸಿದ್ದರು. ಈ ಗಲಾಟೆ ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು.

 ಬಾಂಗ್ಲಾ ಯುವ ಆಟಗಾರರು ಭಾರತವನ್ನು ಫೈನಲ್ ನಲ್ಲಿ ಸೋಲಿಸಿದ ನಂತರ ಬಾಂಗ್ಲಾ ಆಟಗಾರನೊಬ್ಬ ಭಾರತೀಯ ಆಟಗಾರನ ಕುರಿತು ಆಡಿದ ಮಾತು ಅಲ್ಲಿದ್ದ ಇತರೆ ಭಾರತೀಯ ಆಟಗಾರರನ್ನು ರೊಚ್ಚಿಗೆಬ್ಬಿಸಿತ್ತು. ಇದರಿಂದಾಗಿ ಆಟಗಾರರ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಈ ಸಂದರ್ಭದಲ್ಲಿ ಭಾರತ ತಂಡದ ನಾಯಕ ಪ್ರಿಯಂಗರ್ಗ್ ಮಧ್ಯಪ್ರವೇಶಿಸಿದಾಗಲೂ ಬಾಂಗ್ಲಾ ಆಟಗಾರರು ತಮ್ಮ ದರ್ಪ ತೋರಿದರು. ಆಗ ಎರಡೂ ಆಟಗಾರರ ನಡುವೆ ಘರ್ಷಣೆ ನಡೆಯುವ ಹಂತಕ್ಕೆ ತಲುಪಿತು. ಈ ಘಟನೆ ವಿಶ್ವ ಕ್ರಿಕೆಟ್ ಪ್ರೇಮಿಗಳಲ್ಲಿ ಬೇಸರಕ್ಕೆ ಕಾರಣವಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಬಾಂಗ್ಲಾ ಆಟಗಾರರನ್ನು ಭೀಕರವಾಗಿ ಟ್ರೋಲ್ ಮಾಡುತ್ತಿದ್ದಾರೆ. 

SCROLL FOR NEXT