ಕ್ರಿಕೆಟ್

ಐಸಿಸಿಯ 4 ದಿನಗಳ ಟೆಸ್ಟ್ ಪಂದ್ಯದ ಚಿಂತನೆ ‘ಹಾಸ್ಯಾಸ್ಪದ ಕಲ್ಪನೆ’: ಗೌತಮ್ ಗಂಭೀರ್

Lingaraj Badiger

ನವದೆಹಲಿ: ಒಂದು ದಿನ ಕಡಿತಗೊಳಿಸಿ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಮಾದರಿಗೆ ಪರಿಷ್ಕರಣೆ ಮಾಡಲು ಮುಂದಾಗಿರುವ ಅಂತಾರಾಷ್ಟ್ರೀ ಕ್ರಿಕೆಟ್ ಮಂಡಳಿ(ಐಸಿಸಿ) ಪ್ರಸ್ತಾಪವನ್ನು ಭಾರತ ತಂಡದ ಮಾಜಿ ಆರಂಭಿಕ ಹಾಗೂ ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ವಿರೋಧಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಅಂಕಣದಲ್ಲಿ ಈ ಬಗ್ಗೆ ಬರೆದಿರುವ ಗಂಭೀರ್,” ಸ್ವಾಭಾವಿಕ ಐದು ದಿನಗಳ ಟೆಸ್ಟ್ ಪಂದ್ಯದಲ್ಲಿ ಒಂದು ದಿನ ಕಡಿತಗೊಳಿಸಿದರೆ, ಬಹುತೇಕ ಪಂದ್ಯಗಳಲ್ಲಿ ಫಲಿತಾಶವೇ ಮೂಡಿ ಬರುವುದಿಲ್ಲ. ಐಸಿಸಿಯ ಈ ನಿರ್ಧಾರ ‘ಹಾಸ್ಯಾಸ್ಪದ ಕಲ್ಪನೆ’ ಎಂದು ಟೀಕಿಸಿದ್ದಾರೆ.

2023ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಒಂದು ಭಾಗವಾಗಿ ಐಸಿಸಿ ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳನ್ನು ಪರಿಗಣಿಸುವ ಸಾಧ್ಯತೆ ಇದೆ. ದೇಶೀಯ ಟಿ-20 ಲೀಗ್ ಗಳು ಹಾಗೂ ಸಹಭಾಗಿತ್ವ ಟೂರ್ನಿಯ ಆಯೋಜನೆಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐಸಿಸಿ ಈ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಹಾಗಾಗಿ, ದ್ವಿಪಕ್ಷೀಯ ವೇಳಾಪಟ್ಟಿಯಲ್ಲಿ ದೀರ್ಘ ಕಾಲದ ಕ್ರಿಕೆಟ್ ಮಾದರಿಯಲ್ಲಿ ಒಂದು ದಿನ ಉಳಿಸಲು ಯೋಜನೆ ಹಾಕಿಕೊಂಡಿದೆ.

ಐಸಿಸಿಯ ಈ ಪ್ರಸ್ತಾಪದ ಬಗ್ಗೆ ತನ್ನದೇ ಆದ ಅಭಿಪ್ರಾಯ ವ್ಯಕ್ತಪಡಿಸಿರುವ ಗಂಭೀರ್, “ ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳು ಹಾಸ್ಯಾಸ್ಪದ ಕಲ್ಪನೆ ಮತ್ತು ಇದನ್ನು ಕೈ ಬಿಡಬೇಕು. ಇದು ಪಂದ್ಯಗಳ ಡ್ರಾಗೆ ಹೆಚ್ಚು ಆಹ್ವಾನಿಸುತ್ತದೆ. ಇದರಲ್ಲಿ ಸ್ಪಿನ್ನರ್ ಗಳ ಮಹತ್ವವನ್ನು ಮೊಟಕುಗೊಳಿಸುತ್ತದೆ. ಐದನೇ ದಿನದ ಪಿಚ್ ನಲ್ಲಿ ಆಡುವ ಮೋಡಿಯನ್ನು ದೂರ ಮಾಡುತ್ತದೆ,” ಎಂದು ಹೇಳಿದ್ದಾರೆ.

”ಟೆಸ್ಟ್ ಕ್ರಿಕೆಟ್ ಉಳಿಸಲು ಹಗಲು-ರಾತ್ರಿ ಪಂದ್ಯಗಳ ಆಯೋಜನೆ ಮಾಡಬೇಕು ಹಾಗೂ ಆಟಗಾರರ ಫಿಟ್ನೆಸ್ ಅನ್ನು ಉತ್ತಮವಾಗಿ ನಿರ್ವಹಿಸುವುದು ಅಗತ್ಯ ಎಂದು ಮತ್ತೆ ಕೆಲವರು ಸಲಹೆ ನೀಡಿದ್ದರು. ಟೆಸ್ಟ್ ಕ್ರಿಕೆಟ್ ಅನ್ನು ಜಾಗತಿಕ ಕ್ರೀಡೆಯಾಗಿ ರೂಪಿಸಲು ಅಮೆರಿಕದ ಮಾರುಕಟ್ಟೆ ಪರಿಣಿತರನ್ನು ಬಳಿಸಿಕೊಳ್ಳಬೇಕು ಎಂಬ ಸಲಹೆಯೂ ನನ್ನ ಕಿವಿಗೆ ಬಿದ್ದಿದೆ. ಚಾಂಪಿಯನ್ ಕ್ರಿಕೆಟಿಗರ ಕೊರತೆ ಹಾಗೂ ಉತ್ಸಾಹಭರಿತ ಪಿಚ್ ಗಳ ಕೊರತೆ ಎಂದು ನಾನು ಎರಡು ಅಂಶಗಳನ್ನು ಪಟ್ಟಿ ಮಾಡಿದ್ದೇನೆ,” ಎಂದರು.

ಇದಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಐಸಿಸಿ ನಾಲ್ಕು ದಿನಗಳ ಯೋಜನೆಗೆ ಒಲವು ತೋರಲಿಲ್ಲ. ಟೆಸ್ಟ್ ಕ್ರಿಕೆಟ್ ಸ್ವರೂಪಕ್ಕೆ ಅನ್ಯಾಯವಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

SCROLL FOR NEXT