ನವದೆಹಲಿ: ದ್ವೀಪ ರಾಷ್ಟ್ರ ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಸೂಪರ್ ಸ್ಮಾಷ್ ಟಿ-20 ಟೂರ್ನಿಯಲ್ಲಿ ಲಿಯೋ ಕಾರ್ಟರ್ ಅವರು 6 ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸುವ ಮೂಲಕ ವಿಶಿಷ್ಠ ದಾಖಲೆಯನ್ನು ಮಾಡಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಏಳನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಲಿಯೋ ಪಾತ್ರರಾದರು.
ಕ್ರೈಸ್ಟ್ ಚರ್ಚ್ ಓವಲ್ ಮೈದಾನದಲ್ಲಿ ನಡೆದ 22ನೇ ಪಂದ್ಯದಲ್ಲಿ ನಾಥರ್ನ್ ನೈಟ್ಸ್ ವಿರುದ್ಧದ ಪಂದ್ಯದಲ್ಲಿ ಕ್ಯಾಂಟರ್ ಬ್ಯೂರಿ ತಂಡದ ಪರ ಲಿಯೋ ಈ ಸಾಧನೆ ಮಾಡಿದರು.
ನಾಥರ್ನ್ ನೈಟ್ಸ್ ನೀಡಿದ್ದ 220 ರನ್ ಗುರಿ ಹಿಂಬಾಲಿಸಿದ್ದ ಕ್ಯಾಂಟರ್ ಬ್ಯೂರಿ ತಂಡಕ್ಕೆೆ ಕೊನೆಯ 30 ಎಸೆತಗಳಲ್ಲಿ 64 ರನ್ ಅಗತ್ಯವಿತ್ತು. ಈ ವೇಳೆ 16ನೇ ಓವರ್‌ನಲ್ಲಿ ಲಿಯೋ ಕಾರ್ಟರ್ ಅವರು ಸ್ಪಿನ್ನರ್ ಡೆವಿಸಿಚ್‌ನ ಎಲ್ಲಾ ಆರು ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ತಂಡದ ಗೆಲುವಿಗೆ ಮಹತ್ತರ ಪಾತ್ರವಹಿಸಿದರು.
ಕೊನೆಯವರೆಗೂ ಬ್ಯಾಟಿಂಗ್ ಮಾಡಿದ ಲಿಯೋ ಕಾರ್ಟರ್ ಕೇವಲ 29 ಎಸೆತಗಳಲ್ಲಿ 70 ರನ್ ಚಚ್ಚಿದರು. ಮತ್ತೊಂದು ತುದಿಯಲ್ಲಿ ಇವರಿಗೆ ಸಾಥ್ ನೀಡಿದ ಕೊಲೆ ಮೆಕ್‌ಕೊನ್ಚಿ 49 ರನ್ ಸಿಡಿಸಿ ಅಜೇಯರಾಗಿ ಉಳಿದರು.ಇನ್ನೂ ಏಳು ಎಸೆತಗಳು ಬಾಕಿ ಇರುವಂತೆಯೆ ಕ್ಯಾಂಟರ್ ಬ್ಯೂರಿ ತಂಡ ಮೂರು ವಿಕೆಟ್ ಕಳೆದುಕೊಂಡು 222 ರನ್ ಗಳಿಸಿ ಗೆಲುವಿನ ದಡ ಸೇರಿತು.