ಕ್ರಿಕೆಟ್

ಟಿ20 ಕ್ರಿಕೆಟ್‌ ಗೆ ಕೊಹ್ಲಿಗಿಂತ ರೋಹಿತ್‌ ಉತ್ತಮ ನಾಯಕ: ಶ್ರೀಶಾಂತ್‌

Vishwanath S

ನವದೆಹಲಿ: ಟೀಂ ಇಂಡಿಯಾ 2007ರ ಟಿ20 ಕ್ರಿಕೆಟ್ ವಿಶ್ವಕಪ್ ಮತ್ತು 2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿರುವ ಭಾರತ ತಂಡದ ಪ್ರಮುಖ ಸದಸ್ಯನಾಗಿದ್ದ ಬಲಗೈ ವೇಗದ ಬೌಲರ್ ಎಸ್ ಶ್ರೀಶಾಂತ್ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಯಶಸ್ಸು ಕಂಡು ಭಾರತದ ಭವಿಷ್ಯದ ತಾರೆ ಎಂದೇ ಗುರುತಿಸಿಕೊಂಡಿದ್ದರು.

ಆದರೆ, 2013ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದ ಸ್ಟಾಟ್ ಫಿಕ್ಸಿಂಗ್ ನಲ್ಲಿ ಶ್ರೀಶಾಂತ್ ಪಾಲ್ಗೊಂಡಿದ್ದಾರೆ ಎಂಬ ಆರೋಪ ಅವರ ಕ್ರಿಕೆಟ್ ವೃತ್ತಿಬದುಕನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿತು. ಉತ್ತಮ ವೇಗದೊಂದಿಗೆ ಸ್ವಿಂಗ್ ಕೂಡ ಮಾಡುವ ಸಾಮರ್ಥ್ಯ ಹೊಂದಿದ್ದ 37 ವರ್ಷದ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ಕಳಂಕ ಹೊತ್ತು ತಮ್ಮ ವೃತ್ತಿಬದುಕಿನ 7 ಅತ್ಯಮೂಲ್ಯ ವರ್ಷಗಳನ್ನು ಕಳೆದುಕೊಂಡರು.

ಕಳೆದ ವರ್ಷ ತಮ್ಮ ವಿರುದ್ಧದ ಎಲ್ಲಾ ಆರೋಪಗಳಿಂದ ಮುಕ್ತರಾಗಿರುವ ಕೇರಳ ಎಕ್ಸ್ ಪ್ರೆಸ್ ವಿರುದ್ಧ ಬಿಸಿಸಿಐ ಹೇರಿದ್ದ ಆಜೀವ ನಿಷೇಧ ಕೂಡ ಸೆಪ್ಟೆಂಬರ್ 13ಕ್ಕೆ ಅಂತ್ಯಗೊಳ್ಳಲಿದೆ. ಈ ಮೂಲಕ ಕ್ರಿಕೆಟ್ ವೃತ್ತಿ ಬದುಕಿಗೆ ಕಮ್ ಬ್ಯಾಕ್ ಮಾಡುವುದನ್ನು ಎದುರು ನೋಡುತ್ತಿರುವ ಶ್ರೀಶಾಂತ್ ಗೆ ಈಗಾಗಗಲೇ ಕೇರಳ ರಣಜಿ ತಂಡದಲ್ಲಿ ಸ್ಥಾನ ಸಿಗುವುದು ಕೂಡ ಖಾತ್ರಿಯಾಗಿದೆ. ಕೇವಲ ರಣಜಿ ಮಾತ್ರವಲ್ಲ 2021ರ ಐಪಿಎಲ್ ಗೆ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳುವುದು ಕೂಡ ಶ್ರೀಶಾಂತ್ ಗುರಿಯಾಗಿದೆ.

ಕ್ರಿಕೆಟ್‌ ವೃತ್ತಿಬದುಕಿನಲ್ಲಿ 2ನೇ ಇನಿಂಗ್ಸ್‌ ಆರಂಭಿಸುವುದನ್ನು ಎದುರು ನೋಡುತ್ತಿರುವ ಶ್ರೀಶಾಂತ್‌, ಇತ್ತೀಚೆಗೆ ವಿಯಾನ್‌ ವೆಬ್‌ಸೈಟ್‌ಗೆ ನೀಡಿರುವ ವಿಶೇಷ ಸಂದರ್ಶನದ ವೇಳೆ ಶ್ರೇಷ್ಠ ಟೀಮ್‌ ಇಂಡಿಯಾವನ್ನು ಆಯ್ಕೆ ಮಾಡಿದ್ದು ಅದರಲ್ಲಿ ತಮ್ಮ ಹೆಸರನ್ನು ತಾವೇ ಹೆಸರಿಸಿಕೊಂಡಿದ್ದಾರೆ. ಜೊತೆಗೆ ಭಾರತ ತಂಡದಲ್ಲಿ ಆಲ್‌ರೌಂಡರ್‌ ಸುರೇಶ್‌ ರೈನಾ ಅವರನ್ನು ಆಡಿಸುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ.

"ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಒಂದೇ ತಂಡವನ್ನು ಆಡಿಸಬೇಕು ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ. ಅಂದಹಾಗೆ ಸುರೇಶ್‌ ರೈನಾ ಅವರಂತಹ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗಬೇಕು. ಇನ್ನು ಟಿ20 ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ಕ್ಯಾಪ್ಟನ್ಸಿ ವಹಿಸಿಕೊಳ್ಳಬೇಕು, ಉಳಿದ ಮಾದರಿಗಳಲ್ಲಿ ಕೊಹ್ಲಿ ತಂಡವನ್ನು ಮುನ್ನಡೆಸಿದರೆ ಉತ್ತಮ ಎಂದು ಶ್ರೀ ಅಭಿಪ್ರಾಯ ಪಟ್ಟಿದ್ದಾರೆ.

SCROLL FOR NEXT