ಕ್ರಿಕೆಟ್

ಭಾರತದ ನಾಟ್‌ವೆಸ್ಟ್ ಸರಣಿ ಗೆಲುವಿಗೆ 18 ವರ್ಷಗಳು

Srinivas Rao BV

ನವದೆಹಲಿ: ಇಂಗ್ಲೆಂಡ್‌ ಲಾರ್ಡ್ಸ್‌ ಕ್ರಿಕೆಟ್‌ ಮೈದಾನದಲ್ಲಿ ಇದೇ ದಿನ 2002 ರಂದು ಭಾರತ ತಂಡದ ಸಂಭ್ರಮ ಮುಗಿಲು ಮುಟ್ಟಿತ್ತು. 

ಸೌರವ್ ಗಂಗೂಲಿ ನಾಯಕತ್ವದ ಟೀಮ್‌ ಇಂಡಿಯಾ ನಾಟ್‌ವೆಸ್ಟ್‌ ಸರಣಿಯ ಫೈನಲ್‌ ಹಣಾಹಣಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಅಂದು ದಾದಾ ತಮ್ಮ ಶರ್ಟ್‌ ಬಿಚ್ಚಿ ಸಂಭ್ರಮಿಸಿದ್ದರು. 

ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಈ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.

ನಾಸೀರ್‌ ಹುಸೇನ್‌ ನಾಯಕತ್ವದ ಇಂಗ್ಲೆಂಡ್‌ ತಂಡ ನೀಡಿದ್ದ 326 ರನ್‌ ಗುರಿ ಹಿಂಬಾಲಿಸಿದ್ದ ಭಾರತ, ಒಂದು ಹಂತದಲ್ಲಿ 146 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡು ತೀವ್ರ ಆಘಾತಕ್ಕೆ ಒಳಗಾಗಿತ್ತು. ನಾಯಕ ಸೌರವ್‌ ಗಂಗೂಲಿ, ವಿರೇಂದ್ರ ಸೆಹ್ವಾಗ್‌, ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಔಟ್‌ ಆಗಿ ಪೆವಿಲಿಯನ್‌ ಸೇರಿದ್ದರು. 

ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ತಂಡವನ್ನು ಗೆಲ್ಲಿಸುವ ಜವಾಬ್ದಾರಿ ಯುವರಾಜ್ ಸಿಂಗ್ ಹಾಗೂ ಮೊಹಮ್ಮದ್ ಕೈಫ್ ಅವರ ಹೆಗಲೇರಿತ್ತು. ಅಂಡರ್-19 ನಿಂದಲೂ ಜೊತೆಯಾಗಿ ಆಡಿದ್ದ ಇಬ್ಬರೂ ಆಟಗಾರರು ಪಂದ್ಯವನ್ನೇ ಬದಲಿಸುವ ಪಾರ್ಟ್ನರ್ಶಿಪ್ ಗೆ ಮುಂದಾದರು. ಆ ನಂತರದ್ದು ಇತಿಹಾಸ!

121 ರನ್ ಗಳ ಜೊತೆಯಾಟ ಆಡಿದ್ದ ಕೈಫ್ ಹಾಗೂ ಯುವರಾಜ್ ಸಿಂಗ್ ಭಾರತ ತಂಡವನ್ನು ಆ ಪಂದ್ಯದಲ್ಲಿ ಮರಳಿ ಹಳಿಗೆ ತಂದಿದ್ದರು. ಆದರೆ 42 ನೇ ಓವರ್ ನಲ್ಲಿ 69 ರನ್ ಗಳಿಸಿದ್ದ ಯುವರಾಜ್ ಸಿಂಗ್ ವಿಕೆಟ್ ಒಪ್ಪಿಸಿದರು, ನಾನ್ ಸ್ಟ್ರೈಕ್ ಎಂಡ್ ನಲ್ಲಿದ್ದ ಕೈಫ್ ಏಕಾಂಗಿಯಾಗಿದ್ದರು. ಆದರೂ ಛಲ ಬಿಡದೇ 87 ರನ್ ಗಳ ಮೂಲಕ ಗೆಲುವು ಭಾರತ ತಂಡಕ್ಕೆ ದಕ್ಕುವಂತೆ ಮಾಡಿದ್ದರು. ಕೈಫ್ ಗೆ ಜಹೀರ್ ಖಾನ್ ಅಂದು ಸಾಥ್ ನೀಡಿದ್ದರು. 

SCROLL FOR NEXT