ಕ್ರಿಕೆಟ್

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್: ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗೆ ಜನುಮದಿನ ಸಂಭ್ರಮ!

Srinivasamurthy VN

ನವದೆಹಲಿ: ಇದೇ ಮೊದಲ ಬಾರಿಗೆ ಮಹಿಳಾ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿರುವ ಭಾರತ ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿದ್ದು, ಇದರ ನಡುವೆಯೇ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ ಕೂಡ ಹೌದು..

ಹೌದು.. ಇಂದು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರಿಗೆ ಜನ್ಮದಿನದ ಸಂಭ್ರಮವಾಗಿದ್ದು, ಮಾರ್ಚ್ 8 ಅವರ ಜನ್ಮದಿನವಾಗಿದೆ. ಹೀಗಾಗಿ ಅವರು ಇಂದು 31ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ವಿಶೇಷವೆಂದರೆ ಇಂದೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕೂಡ ಇದ್ದು, ಇದೇ ದಿನ ಭಾರತ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಆಡುತ್ತಿದೆ. ಹೀಗಾಗಿ ಇಂದಿನ ಪಂದ್ಯವನ್ನು ಭಾರತ ತಂಡ ಗೆದ್ದು ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಭಾರತದ ಎಲ್ಲ ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಲು ಸಜ್ಜಾಗಿ ನಿಂತಿದೆ. 

ಇತ್ತ ಬರ್ತ್ ಡೇ ಗರ್ಲ್ ಹರ್ಮನ್ ಪ್ರೀತ್ ಕೌರ್ ಗೆ ಬಿಸಿಸಿಐ ವಿಶೇಷವಾಗಿ ಶುಭಕೋರಿದ್ದು, ಇಂದಿನ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದು ಕೊಡುವ ವಿಶ್ವಾಸ ವ್ಯಕ್ತಪಡಿಸಿದೆ. ಒಂದು ವೇಳೆ ಈ ಪಂದ್ಯದಲ್ಲಿ ಭಾರತ ಗೆದ್ದರೆ ಭಾರತಕ್ಕೆ ಮೊಟ್ಟ ಮೊದಲ ಮಹಿಳಾ ಟಿ20 ವಿಶ್ವಕಪ್ ತಂದುಕೊಟ್ಟ ಭಾರತದ ಮೊದಲ ನಾಯಕಿ ಎಂಬ ಕೀರ್ತಿಗೂ ಹರ್ಮನ್ ಪ್ರೀತ್ ಕೌರ್ ಭಾಜನರಾಗಲಿದ್ದಾರೆ.

ಇನ್ನು ಹರ್ಮನ್ ಪ್ರೀತ್ ಕೌರ್ ಅವರು ಈ ವರೆಗೂ 104 ಟಿ20 ಪಂದ್ಯಗಳನ್ನಾಡಿದ್ದು, 27.9 ಸರಾಸರಿಯಲ್ಲಿ 2038 ರನ್ ಗಳಿಸಿದ್ದಾರೆ. ಈ ಪೈಕಿ 1 ಶತಕ ಹಾಗೂ 6 ಅರ್ಧಶತಕಗಳು ಸೇರಿವೆ. ಅಲ್ಲದೆ ಭಾರತದ ಪರ 100 ಟಿ20 ಪಂದ್ಯವನ್ನಾಡಿದ ಮೊದಲ ಆಟಗಾರ್ತಿ ಎಂಬ ಕೀರ್ತಿಗೂ ಹರ್ಮನ್ ಪ್ರೀತ್ ಕೌರ್ ಭಾಜನರಾಗಿದ್ದಾರೆ.

SCROLL FOR NEXT