ಕ್ರಿಕೆಟ್

17 ವರ್ಷಗಳ ಬಳಿಕ ವಿಶ್ವಕಪ್ ಫೈನಲ್ ನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ, ಭಾರತಕ್ಕೆ ಸೇಡು ತೀರಿಸುವ ತವಕ

Srinivasamurthy VN

ಮೆಲ್ಬೋರ್ನ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಬರೊಬ್ಬರಿ 17 ವರ್ಷಗಳ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. 

2003ರಲ್ಲಿ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪರಾಭವಗೊಂಡಿತ್ತು. ಅಂದು ಟೀಮ್ ಇಂಡಿಯಾದ 2ನೇ ವಿಶ್ವಕಪ್ ಕನಸು ಕೂದಳೆಳೆ ಅಂತರದಲ್ಲಿ ಭಗ್ನಗೊಂಡಿತ್ತು. ಅಂದು ಸೌರವ್ ಗಂಗೂಲಿ ಭಾರತ ತಂಡದ ನಾಯಕರಾಗಿದ್ದರು. ಇದೀಗ 17 ವರ್ಷಗಳ ಬಳಿಕ ಐಸಿಸಿ ವಿಶ್ವಕಪ್‌ನಲ್ಲಿ ಮತ್ತದೇ ಆಸ್ಟ್ರೇಲಿಯಾ ಸವಾಲನ್ನು ಭಾರತ ಎದುರಿಸುತ್ತಿದೆ. ಐಸಿಸಿ ಮಹಿಳೆಯರ ವಿಶ್ವಕಪ್‌ನಲ್ಲಿ ಭಾರತ ಇದುವರೆಗೆ ಪ್ರಶಸ್ತಿಯನ್ನು ಗೆದ್ದಿಲ್ಲ. ಅಲ್ಲದೆ ಇದೇ ಚೊಚ್ಚಲ ಬಾರಿಗೆ ಭಾರತ ತಂಡ ಫೈನಲ್ ಪ್ರವೇಶ ಮಾಡಿದ್ದು, ಮೊದಲ ಪ್ರಯತ್ನದಲ್ಲೇ ಭಾರತ ತಂಡ ಆಸಿಸ್ ಸವಾಲನ್ನು ಮೆಟ್ಟಿನಿಂತರೆ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಬರೆಯಲಿದೆ.

1983ನೇ ಇಸವಿಯಲ್ಲಿ ಮಾಜಿ ನಾಯಕ ಕಪಿಲ್ ದೇವ್ ನೇತೃತ್ವದಲ್ಲಿ ಚೊಚ್ಚಲ ಪುರುಷರ ವಿಶ್ವಕಪ್ ಗೆದ್ದಾಗ ಭಾರತೀಯ ಕ್ರಿಕೆಟ್‌ನ ಇತಿಹಾಸವೇ ಬದಲಾಗಿತ್ತು. ಅದೇ ರೀತಿ ಹರ್ಮನ್‌ಪ್ರೀತ್ ಕೌರ್ ಪಡೆ ಈಗ ಚಾರಿತ್ರಿಕ ಸಾಧನೆ ಬರೆಯುವ ತವಕದಲ್ಲಿದೆ. ಏಕದಿನ ವಿಶ್ವಕಪ್‌ಗಳಲ್ಲೂ ಭಾರತ ಮಹಿಳಾ ತಂಡ ಇದುವರೆಗೆ ವಿಶ್ವಕಪ್ ಗೆದ್ದಿಲ್ಲ. ಹಾಗಾಗಿ ಐಸಿಸಿ ಟೂರ್ನಿಯಲ್ಲಿ ಮಹಿಳಾ ತಂಡದ ಪಾಲಿಗೆ ಚೊಚ್ಚಲ ವಿಶ್ವಕಪ್ ಸಾಧನೆಯಾಗಲಿದೆ. ಮಹಿಳಾ ಏಕದಿನ ವಿಶ್ವಕಪ್‌ಗಳಲ್ಲಿ 2005 ಹಾಗೂ 2017ನೇ ಇಸವಿಗಳಲ್ಲಿ ಭಾರತ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತ್ತು.

ಇಂದಿನ ಪಂದ್ಯದಲ್ಲಿ ಭಾರತ ಗೆದ್ದು ಆ ಹಳೆಯ ಕಹಿನೆನಪನ್ನು ಅಳಿಸಿ ಹಾಕುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇಂದಿನ ಪಂದ್ಯ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ.

SCROLL FOR NEXT