ಕ್ರಿಕೆಟ್

2021ರಲ್ಲಾದರೂ ಮಹಿಳಾ ಐಪಿಎಲ್‌ ಆಯೋಜಿಸಿ: ಬಿಸಿಸಿಐಗೆ ಮಿಥಾಲಿ ರಾಜ್ ಆಗ್ರಹ

Lingaraj Badiger

ನವದೆಹಲಿ: ಜಗತ್ತಿನಲ್ಲೇ ಕೊರೋನಾ ವೈರಸ್‌ ಭೀತಿ ಆವರಿಸಿರುವ ಈ ಗಳಿಗೆಯಲ್ಲಿ ಬಿಸಿಸಿಐ ಇಂಡಿಯನ್ ಪ್ರೀಮಿಯರ್‌ ಲೀಗ್‌ ನ 13ನೇ ಆವೃತ್ತಿಯ ಆಯೋಜನೆಗೆ ಇನ್ನಿಲ್ಲದ ಕರಸತ್ತು ಮಾಡುತ್ತಿದೆ.

ನಿಗದಿಯಂತೆ 2020ನೇ ಐಪಿಎಲ್‌ ಟೂರ್ನಿ ಮಾರ್ಚ್‌ 29ರಂದು ಮುಂಬಯಿನಲ್ಲಿ ಶುರುವಾಗಬೇಕಿತ್ತು. ಆದರೆ, ವೈರಸ್‌ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ. ಇದೀಗ 3 ವಾರಗಳ ಕಾಲ ಇಡೀ ದೇಶವೇ ಲಾಕ್‌ಡೌನ್‌ ಆಗಿರುವಾಗ ಏಪ್ರಿಲ್‌ ಅಂತ್ಯಕ್ಕೂ ಐಪಿಎಲ್‌ ಆರಂಭವಾಗುವ ಯಾವುದೇ ಸುಳಿವಿಲ್ಲ.

ಇಂಥ ಸಂದರ್ಭದಲ್ಲಿ ಮಾತನಾಡಿರುವ ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಮಹಿಳಾ ಐಪಿಎಲ್‌ ಟೂರ್ನಿಯನ್ನು ಆದಷ್ಟು ಬೇಗ ಆಯೋಜಿಸಬೇಕು. ಬಿಸಿಸಿಐ ಈ ಟೂರ್ನಿ ಆಯೋಜನೆಗೆ ಮೀನಾಮೇಶ ಎಣಿಸುವುದನ್ನು ಬಿಡಬೇಕು, ಎಂದು ಆಗ್ರಹ ಮಾಡಿದ್ದಾರೆ.

ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‌ 2021ರಲ್ಲೇ ನಡೆಸಬೇಕು. ಪುರುಷರ ಐಪಿಎಲ್‌ನಂತೆ ಮಹಿಳಾ ಐಪಿಎಲ್‌ ಟೂರ್ನಿಯನ್ನೂ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಆಯೋಜಿಸುವುದು ಉತ್ತಮ ಎಂದು 37 ವರ್ಷದ ಅನುಭವಿ ಆಟಗಾರ್ತಿ ಹೇಳಿದ್ದಾರೆ.

"ವೈಯಕ್ತಿಕವಾಗಿ ಹೇಳುವುದಾದರೆ ಮಹಿಳಾ ಐಪಿಎಲ್‌ ಟೂರ್ನಿಯನ್ನು ಮುಂದಿನ ವರ್ಷ ನಡೆಸಬೇಕು. ನೀತಿ ನಿಯಮಗಳಲ್ಲಿ ಕೆಲವು ಬದಲಾವಣೆ ತಂದು ಸಣ್ಣ ಪ್ರಮಾಣದಲ್ಲಾದರೂ ಈ ಟೂರ್ನಿಯನ್ನು ಆಯೋಜಿಸಬೇಕು. ಉದಾಹರಣೆಗೆ ತಂಡವೊಂದರಲ್ಲಿ ನಾಲ್ಕು ವಿದೇಶಿಗರ ಬದಲಿಗೆ ಐದಾರು ವಿದೇಶಿಯರಿಗೆ ಆಡುವ ಅವಕಾಶ ಕಲ್ಪಿಸಬೇಕು," ಎಂದು ಸಂದರ್ಶನವೊಂದರಲ್ಲಿ ಮಿಥಾಲಿ ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಬಿಸಿಸಿಐ, ಮಹಿಳಾ ಐಪಿಎಲ್‌ನ ಪ್ರದರ್ಶನ ಪಂದ್ಯಗಳನ್ನು ಆಯೋಜಿಸುತ್ತಾ ಬಂದಿದೆ. ಆದರೆ, ಪೂರ್ಣ ಪ್ರಮಾಣದ ಟೂರ್ನಿ ಆಯೋಜನೆಗೆ ಇನ್ನು ಸಮಯ ಬೇಕಾಗುತ್ತದೆ ಎಂದು ಹೇಳಿದೆ. ಈ ವರ್ಷ 7 ಪಂದ್ಯಗಳ ಮಹಿಳಾ ಟಿ20 ಚಾಲೆಂಜರ್‌ ಟೂರ್ನಿಯನ್ನು ಜೈಪುರದಲ್ಲಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಆದರೆ ಕೋವಿಡ್‌-19 ಭೀತಿ ಹಿನ್ನೆಲೆಯಲ್ಲಿ ಈ ಟೂರ್ನಿಯೂ ರದ್ದಾಗುವ ಸಾಧ್ಯತೆ ಇದೆ.

ಇದಕ್ಕೂ ಮುನ್ನ ಭಾರತ ತಂಡದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌ ಕೂಡ 2021ರಲ್ಲಿ ಮಹಿಳಾ ಐಪಿಎಲ್‌ ಆಯೋಜನೆ ಬಗ್ಗೆ ಸೌರವ್‌ ಗಂಗೂಲಿ ಸಾರಥ್ಯದ ಬಿಸಿಸಿಐ ಯೋಜನೆ ರೂಪಿಸಬೇಕು ಎಂದು ಅಭಿಪ್ರಾಯ ಹೊರಹಾಕಿದ್ದರು.

SCROLL FOR NEXT