ಕ್ರಿಕೆಟ್

ಧೋನಿ 30 ಲಕ್ಷ ಗಳಿಸಿ ರಾಂಚಿಯಲ್ಲಿ ನೆಮ್ಮದಿಯಾಗಿ ಇರಲು ಬಯಸಿದ್ದರು- ವಾಸೀಂ ಜಾಫರ್ 

Nagaraja AB

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಕೇವಲ 30 ಲಕ್ಷ ಗಳಿಸಿ ರಾಂಚಿಯಲ್ಲಿ ನೆಮ್ಮದಿಯಾಗಿ ಬದುಕಲು ಬಯಸಿದ್ದರು ಎಂಬುದಾಗಿ ವೃತ್ತಿಜೀವನದ ಆರಂಭದಲ್ಲಿ ಅವರ ಜೊತೆಯಲ್ಲಿ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಮಾಜಿ ಬ್ಯಾಟ್ಸ್ ಮನ್ ವಾಸೀಂ ಜಾಫರ್ ನೆನಪು ಮಾಡಿಕೊಂಡಿದ್ದಾರೆ

2007ರಲ್ಲಿ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದ್ದ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದ ಧೋನಿ ಅವರಿಗೆ ವಿಶ್ವ ಕ್ರಿಕೆಟ್ ನಲ್ಲಿ ಉತ್ತಮ ಗೌರವವಿದೆ. ಆದರೆ, ಅವರು, ಕ್ರಿಕೆಟ್ ಆಡಿ 30 ಲಕ್ಷ  ಗಳಿಸಿ ರಾಂಚಿಯಲ್ಲಿ ನೆಮ್ಮದಿಯಾಗಿ ಇರಲು ಬಯಸಿರುವುದಾಗಿ ತಮ್ಮೊಂದಿಗೆ ಹೇಳಿಕೊಂಡಿದ್ದರು ಎಂದು ವಾಸೀಂ ಜಾಫರ್ ಟ್ವೀಟರ್ ನಲ್ಲಿ ಅಭಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಇತ್ತೀಚಿಗೆ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿಗೊಂಡಿರುವ ಮುಂಬೈನ ಆಟಗಾರ ವಾಸೀಂ ಜಾಫರ್ , ಧೋನಿಯೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. 

ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋತ ಬಳಿಕ ಧೋನಿ ಟೀಂ ಇಂಡಿಯಾ ಪರ ಯಾವುದೇ ಪಂದ್ಯಗಳಲ್ಲಿಯೂ ಆಡಿಲ್ಲ. ಐಪಿಎಲ್ ಮೂಲಕ ಧೋನಿ ಕಮ್ ಬ್ಯಾಕ್ ಆಗಲಿದ್ದಾರೆ ಎನ್ನಲಾಗುತ್ತಿದ್ದು, ಆದರೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾನುವಾರದಿಂದ ಆರಂಭವಾಗಬೇಕಿದ್ದ ಐಪಿಎಲ್ ಸ್ಥಗಿತಗೊಂಡಿದೆ. 

ಧೋನಿ ಮತ್ತೆ ಟೀಂ ಇಂಡಿಯಾ ಸೇರ್ಪಡೆಯಾದರೆ ಪ್ರಸ್ತುತ ಏಕದಿನ ಮಾದರಿಯಲ್ಲಿ  ವಿಕೆಟ್ ಕೀಪಿಂಗ್ ಜವಾಬ್ದಾರಿ ಮಾಡುತ್ತಿರುವ ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ಅವರ ಒತ್ತಡವನ್ನು ಕಡಿಮೆ ಮಾಡಲಿದೆ  ಎಂದು ಜಾಫರ್ ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ.

SCROLL FOR NEXT