ಕ್ರಿಕೆಟ್

ಟೀಮ್‌ ಇಂಡಿಯಾ ಯಶಸ್ಸಿಗೆ ಥ್ರೋಡೌನ್‌ ತಜ್ಞ ರಘು ಕೊಡುಗೆ ಸ್ಮರಿಸಿದ ವಿರಾಟ್ ಕೊಹ್ಲಿ

Srinivasamurthy VN

ನವದೆಹಲಿ: ಥ್ರೋಡೌನ್ ತಜ್ಞ‌ ಕನ್ನಡಿಗ ಡಿ. ರಾಘವೇಂದ್ರ ಅವರು ಬೌಲಿಂಗ್‌ ಹ್ಯಾಂಡಲ್‌ ಬಳಸಿ ಗಂಟೆಗೆ 150-155 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಈ ಪ್ರತಿಭೆಯಿಂದ ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ಗಳಿಗೆ ವೇಗದ ಬೌಲರ್‌ಗಳ ಎದುರು  ಸುಲಭವಾಗಿ ಬ್ಯಾಟಿಂಗ್‌ ಮಾಡುವುದು ಸಾಧ್ಯವಾಗಿದೆ ಎಂದು ನಾಯಕ‌ ವಿರಾಟ್‌ ಕೊಹ್ಲಿ ಶ್ಲಾಘಿಸಿದ್ದಾರೆ.

ಸ್ಪೂನ್‌ ಆಕಾರದ ಉದ್ದನೆಯ ಹ್ಯಾಂಡಲ್‌ನಲ್ಲಿ ಚೆಂಡನ್ನು ಇರಿಸಿ ಬೌಲರ್‌ಗಳು ಬೌಲಿಂಗ್‌ ಮಾಡಿದ ರೀತಿಯಲ್ಲೇ ಒಂದೆರಡು ಹೆಜ್ಜೆಯಿಟ್ಟು ಎಸೆಯಬಹುದು. ಆದರೆ, ಇದಕ್ಕೆ ಅಮೋಘ ಏಕಾಗ್ರತೆಯ ಅಗತ್ಯವಿರುತ್ತದೆ. ಅಷ್ಟೇ ಅಲ್ಲದೆ ಸತತವಾಗಿ 150 ಕಿ.ಮೀ.ಗೂ ಅಧಿಕ ವೇಗದಲ್ಲಿ  ನಿಖರವಾಗಿ ಒಂದೇ ಜಾಗದಲ್ಲಿ ಚೆಂಡನ್ನು ಎಸೆಯುವುದು ಕೂಡ ಅಷ್ಟು ಸುಲಭವಲ್ಲ. 

ಹೀಗಾಗಿ ರಘು ಅವರ ಈ ಅಪರೂಪದ ಪ್ರತಿಭೆಯ ನೆರವಿನಿಂದ ಭಾರತೀಯ ಬ್ಯಾಟ್ಸ್‌ಮನ್‌ಗಳು ವೇಗಿಗಳ ಎದುರು ಇಂದು ಉತ್ತಮವಾಗಿ ಆಡುತ್ತಿದ್ದಾರೆ. ಟೀಮ್‌ ಇಂಡಿಯಾಗೆ ರಘು ಕೊಡುಗೆ ಅಪಾರ ಎಂದು ಇತ್ತೀಚೆಗೆ ಫೇಸ್‌ಬುಕ್‌ ಲೈವ್‌ ಚಾಟ್‌ನಲ್ಲಿ ವಿರಾಟ್‌ ಕೊಹ್ಲಿ ಹೇಳಿಕೊಂಡಿದ್ದಾರೆ.

"2013ರ ಬಳಿಕ ಭಾರತ ತಂಡ ವೇಗದ ಬೌಲರ್‌ಗಳ ಎದುರು ಅತ್ಯುತ್ತಮವಾಗಿ ಆಡಲು ಶುರು ಮಾಡಿರುವುದಕ್ಕೆ ರಘು ಅವರ ಥ್ರೋಡೌನ್‌ ಬೌಲಿಂಗ್‌ ಮುಖ್ಯ ಕಾರಣ," ಎಂದು ಬಾಂಗ್ಲಾದೇಶದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ ತಮಿಮ್‌ ಇಕ್ಬಾಲ್‌ ಜೊತೆಗಿನ ಫೇಸ್‌ಬುಕ್ ಲೈವ್‌ ಚಾಟ್‌ನಲ್ಲಿ ಕೊಹ್ಲಿ ಹೇಳಿದ್ದಾರೆ.

"ಬ್ಯಾಟ್ಸ್‌ಮನ್‌ಗಳ ಫುಟ್ವರ್ಕ್ ಮತ್ತು ಬ್ಯಾಟ್‌ ಬೀಸುವಿಕೆಯನ್ನು ರಘು ಚೆನ್ನಾಗಿ ಗ್ರಹಿಸಿದ್ದಾರೆ. ಸೈಡ್‌ ಆರ್ಮ್‌ ಬೌಲಿಂಗ್‌ನಲ್ಲಿ ಎಷ್ಟು ಪ್ರಾವೀಣ್ಯ ಗಳಿಸಿದ್ದಾರೆ ಎಂದರೆ ಸುಲಭವಾಗಿ ಗಂಟೆಗೆ 155 ಕಿ.ಮೀ.ಗೂ ಅಧಿಕ ವೇಗದಲ್ಲಿ ಬೌಲಿಂಗ್‌ ಮಾಡಬಲ್ಲರು. ನೆಟ್ಸ್‌ನಲ್ಲಿ ರಘು ಎದುರು ಬ್ಯಾಟ್‌ ಮಾಡಿ ಮ್ಯಾಚ್‌ಗೆ ಬಂದಾಗ ವೇಗಿಗಳ ಎದುರು ಬ್ಯಾಟ್‌ ಬೀಸಲು ನಮ್ಮ ಬಳಿಕ ಹೆಚ್ಚು ಸಮಯವಿದೆ ಎಂಬ ಅನುಭವವಾಗುತ್ತದೆ," ಎಂದು ಕೊಹ್ಲಿ ವಿವರಿಸಿದ್ದಾರೆ.

SCROLL FOR NEXT