ಕ್ರಿಕೆಟ್

ರೋಹಿತ್‌ ಅನುಪಸ್ಥಿತಿ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತಕ್ಕೆ ದೊಡ್ಡ ನಷ್ಟ: ಪಾಕ್ ಮಾಜಿ ಆಟಗಾರ

Vishwanath S

ನವದೆಹಲಿ: ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಎಂದರೆ ಎಲ್ಲಾ ತಂಡಗಳಿಗೂ ಭಯವಿದೆ ಎಂದು ಪಾಕಿಸ್ತಾನ ತಂಡದ ಮಾಜಿ ಆಟಗಾರ ರಮೀಝ್‌ ರಾಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಗೆ ರೋಹಿತ್‌ ಶರ್ಮಾ ಗೈರಾಗುತ್ತಿದ್ದಾರೆ. ನಂತರ, ಆರಂಭವಾಗುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಬಲಗೈ ಬ್ಯಾಟ್ಸ್‌ಮನ್‌ ತಂಡ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ರೋಹಿತ್‌ ಶರ್ಮಾ ಅವರಿಗೆ ಓಡಿಐ ಹಾಗೂ ಟಿ20 ಸರಣಿಗಳಿಗೆ ವಿಶ್ರಾಂತಿ ನೀಡಲಾಗಿದೆ. ಡಿಸೆಂಬರ್‌ 17 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿ ಒಳಗಾಗಿ ರೋಹಿತ್‌ ಟೀಮ್‌ ಇಂಡಿಯಾ ಕೂಡಿಕೊಳ್ಳಲಿದ್ದಾರೆ.

"ರೋಹಿತ್‌ ಶರ್ಮಾ ಮ್ಯಾಚ್‌ ವಿನ್ನರ್‌ ಹಾಗೂ ವಿಶ್ವದ ಎಲ್ಲಾ ತಂಡಗಳಿಗೂ ಈತನ ಬ್ಯಾಟಿಂಗ್‌ ಬಗ್ಗೆ ಭಯ ಇದೆ. ರೋಹಿತ್‌ ಶರ್ಮಾ ಅವರಂಥ ಬ್ಯಾಟ್ಸ್‌ಮನ್‌ ಕ್ರೀಸ್‌ಗೆ ಬಂದಾಗ ಇದು ಎದುರಾಳಿ ಬೌಲರ್‌ಗಳ ಮುಖದಲ್ಲಿ ಕಾಣುತ್ತದೆ. ರೋಹಿತ್‌ ಶರ್ಮಾ ಅನುಪಸ್ಥಿತಿ ಭಾರತಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ರಮೀಝ್‌ ರಾಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಬರುವ ಟಿಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಲು ಭಾರತಕ್ಕೆ ಮತ್ತೊಂದು ಒಳ್ಳೆಯ ಅವಕಾಶವಿದೆ ಎಂದು ಹೇಳಿದ ಪಾಕಿಸ್ತಾನ ಮಾಜಿ ನಾಯಕ, ಉನ್ನತ ಮಟ್ಟದ ಸರಣಿಗೆ ಆಸ್ಟ್ರೇಲಿಯಾ ವಿಷಕಾರಿ ಪಿಚ್‌ಗಳನ್ನು ತಯಾರಿಸಲು ಅಸಂಭವವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗದಲ್ಲಿ ಅತ್ಯುತ್ತಮವಾಗಿದೆ ಎಂದರು.

"ಆಸ್ಟ್ರೇಲಿಯಾದಲ್ಲಿ ಕೆಲ ವರ್ಷಗಳ ಹಿಂದೆ ಬಳಸಿದ್ದ ಪಿಚ್‌ಗಳು ದೀರ್ಘಕಾಲ ಉಳಿದಿಲ್ಲ. ಅಂದರೆ ಅಷ್ಟೊಂದು ಬೌನ್ಸ್, ಪಕ್ಕದ ಚಲನೆ ಹಾಗೂ ವಿಷಕಾರಿಯಾಗಿರುವುದಿಲ್ಲ. ಏಕೆಂದರೆ, ಆತಿಥೇಯರಿಗೆ ಐದು ದಿನಗಳ ಟೆಸ್ಟ್‌ ಪಂದ್ಯ ಬೇಕಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಕರನ್ನು ಸೆಳೆಯುವ ತಂತ್ರ ಇದಾಗಿದೆ ಎಂದು ಹೇಳಿದರು.

"ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಲೈನ್ ಅಪ್‌ ಅಷ್ಟೇ ಭಾರತ ಕೂಡ ಹೊಂದಿದೆ. ಆದರೆ ಭಾರತೀಯ ಬೌಲಿಂಗ್‌ ವಿಭಾಗದಲ್ಲಿ ಸಾಷಕ್ಟು ಸುಧಾರಣೆ ಕಂಡಿರುವುದು ಪ್ರವಾಸಿಗರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಈ ಹಿಂದೆ ಪೆಟ್ಟು ತಿಂದಿದ್ದ ಎದುರಾಳಿ ತಂಡ, ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಕಣಕ್ಕೆ ಇಳಿಯಲಿದೆ ಎಂದು ರಮೀಝ್‌ ರಾಜಾ ತಿಳಿಸಿದರು.

SCROLL FOR NEXT