ಕ್ರಿಕೆಟ್

2ನೇ ಏಕದಿನ ಪಂದ್ಯ: ಸ್ಮಿತ್ ಮತ್ತೆ ಭರ್ಜರಿ ಶತಕ; ಭಾರತಕ್ಕೆ 390 ರನ್ ಗಳ ಬೃಹತ್ ಗುರಿ ನೀಡಿದ ಆಸ್ಟ್ರೇಲಿಯಾ

Srinivasamurthy VN

ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಚ್ರೇಲಿಯಾ ತಂಡ ಭರ್ಜರಿ ಬ್ಯಾಟಿಂಗ್ ಮಾಡಿ ಭಾರತಕ್ಕೆ 390 ರನ್ ಗಳ ಬೃಹತ್ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲಿ ಕೊಂಚ ರಕ್ಷಣಾತ್ಮಕ ಆಟದ ಮೊರೆ ಹೋಗಿತ್ತು. ಆದರೆ ಬಳಿಕ ಡೇವಿಡ್ ವಾರ್ನರ್ ಮತ್ತು ನಾಯಕ ಆ್ಯರಾನ್ ಫಿಂಚ್ ಜೋಡಿ ಆಕ್ರಮಣಕಾರಿ ಆಟವಾಡಿದರು. ಮೊದಲ ವಿಕೆಟ್ ಗೆ ಶತಕದ ಜೊತೆಯಾಟವಾಡಿದ  ಈ ಜೋಡಿಯನ್ನು ಶಮಿಯನ್ನು ಬೇರ್ಪಡಿಸಿದರು. 60 ರನ್ ಗಳಿಸಿದ್ದ ಫಿಂಚ್ ಶಮಿ ಬೌಲಿಂಗ್ ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ 83 ರನ್ ಗಳಿಸಿದ್ದ ಡೇವಿಡ್ ವಾರ್ನರ್ 2ನೇ ರನ್ ಕದಿಯುವ ವೇಳೆ ರನೌಟ್ ಗೆ ಬಲಿಯಾದರು.  

ಈ ಹಂತದಲ್ಲಿ ಲಾಬುಶಾಗ್ನೆ ಜೊತೆಗೂಡಿದ ಸ್ಟೀವೆನ್ ಸ್ಮಿತ್ ಆರಂಭದಿಂದಲೂ ಆಕ್ರಮಣಕಾರಿ ಆಟದ ಮೊರೆ ಹೋದರು. ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ನೋಡನೋಡುತ್ತಲೇ ಸ್ಮಿತ್ ಶತಕ ಕೂಡ ಸಿಡಿಸಿದರು. 64 ಎಸೆತಗಳನ್ನೆದುರಿಸಿದ ಸ್ಮಿತ್ 14 ಬೌಂಡರಿ ಮತ್ತು 2 ಸಿಕ್ಸರ್  ಮೂಲಕ 104 ರನ್ ಗಳಿಸಿದರು. ಈ ವೇಳೆ ಹಾರ್ದಿಕ್ ಪಾಂಡ್ಯಾ ಬೌಲಿಂಗ್ ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಶಮಿಗೆ ಕ್ಯಾಚ್ ನೀಡಿದರು. ಬಳಿಕ ಲಾಬುಶಾಗ್ನೆ 70 ರನ್ ಮತ್ತು  ಗ್ಲೇನ್ ಮ್ಯಾಕ್ಸ್ ವೆಲ್ (ಅಜೇಯ 63) ಅರ್ಧಶತಕ ಸಿಡಿಸಿ ಆಸಿಸ್ ಮೊತ್ತವನ್ನು 350 ರನ್ ಗಡಿ ದಾಟಿಸಿದರು.

ಅಂತಿಮವಾಗಿ ಆಸಿಸ್ ತಂಡ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿ, ಭಾರತಕ್ಕೆ ಗೆಲ್ಲಲು 390 ರನ್ ಗಳ ಬೃಹತ್ ಗುರಿ ನೀಡಿತು.
 
ಭಾರತದ ಪರ ಮಹಮದ್ ಶಮಿ, ಜಸ್ ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯಾ ತಲಾ 1 ವಿಕೆಟ್ ಪಡೆದರು.

SCROLL FOR NEXT