ಕ್ರಿಕೆಟ್

ಐಪಿಎಲ್ 2020: ರಾಹುಲ್ ಶತಕ,ಪಂಜಾಬ್ 3ಕ್ಕೆ 206

Nagaraja AB

ದುಬೈ: ಪ್ರಸಕ್ತ ಐಪಿಎಲ್ ನಲ್ಲಿ ಮೊದಲ ಶತಕ ಬಾರಿಸಿದ ಕೀರ್ತಿಗೆ ಕನ್ನಡಿಗ ಕೆ.ಎಲ್ ರಾಹುಲ್ ಭಾಜನರಾಗಿದ್ದಾರೆ. ಇವರ ಮನಮೋಹಕ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ 2020ರ ಐಪಿಎಲ್ ನ ಆರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ 20 ಓವರ್ ಗಳಲ್ಲಿ  3 ವಿಕೆಟ್ ನಷ್ಟಕ್ಕೆ 206 ರನ್ ಸೇರಿಸಿತು. 
ಪಂಜಾಬ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ನಾಯಕ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ ವಾಲ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. 

ಮೊದಲ ಪಾವರ್ ಪ್ಲೇನ ಸಂಪೂರ್ಣ ಲಾಭ ಪಡೆದ ಪಂಜಾಬ್ ಜೋಡಿ ರನ್ ವೇಗಕ್ಕೆ ಚುರುಕು ಮುಟ್ಟಿಸಿತು. ಈ ಜೋಡಿ ಮೊದಲ ಆರು ಓವರ್ ಗಳಲ್ಲಿ 50 ರನ್ ಸೇರಿಸಿತು. ಮಯಾಂಕ್ ಅಗರ್ ವಾಲ್, ಚಹಾಲ್ ಅವರ ಗೂಗ್ಲಿ ಅರಿಯುವಲ್ಲಿ ಎಡವಿ 26 ರನ್ ಗಳಿಗೆ ಆಟ ಮುಗಿಸಿದರು.

ಎರಡನೇ ವಿಕೆಟ್ ಗೆ ರಾಹುಲ್ ಹಾಗೂ ನಿಕೋಲಸ್ ಪೊರನ್ ಸಹ ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದರು. ಈ ಜೋಡಿಯನ್ನು ಬೇರ್ಪಡಿಸಲು ವಿರಾಟ್ ಶ್ರಮಿಸಿದರು. 38 ಎಸೆತಗಳಲ್ಲಿ ಈ ಜೋಡಿ 57 ರನ್ ಕಾಣಿಕೆ ನೀಡಿತು. ನಿಕೋಲಸ್ 17 ರನ್ ಬಾರಿಸಿ ದುಬೆಗೆ ವಿಕೆಟ್ ಒಪ್ಪಿಸಿದರು. ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಸಹ ದುಬೆ ಅವರಿಗೆ ವಿಕೆಟ್ ನೀಡಿದರು.

ಕರ್ನಾಟಕದ ಸ್ಟಾರ್ ಆಟಗಾರ ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ತಮ್ಮ ಕಲಾತ್ಮಕ ಆಟದ ಮೂಲಕ ರನ್ ಗಳನ್ನು ಗುಡ್ಡೆ ಹಾಕಿದ ರಾಹುಲ್ ಅಬ್ಬರಿಸಿದರು. ಕೆ.ಎಲ್ 69 ಎಸೆತಗಳಲ್ಲಿ 14 ಬೌಂಡರಿ, 7 ಸಿಕ್ಸರ್ ಸಹಾಯದಿಂದ ಅಜೇಯ 132 ರನ್ ಬಾರಿಸಿದರು. ಇದು ಪ್ರಸಕ್ತ ಐಪಿಎಲ್ ನಲ್ಲಿ ಚೊಚ್ಚಲ ಶತಕವಾಗಿದೆ.

SCROLL FOR NEXT