ಕ್ರಿಕೆಟ್

ಐಪಿಎಲ್‌ 2020: ಬ್ಯಾಟಿಂಗ್‌ ವೈಫಲ್ಯತೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಎಂಎಸ್‌ ಧೋನಿ

Srinivasamurthy VN

ನವದೆಹಲಿ: ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಪಡೆಯದೆ ಇರುವುದು ಹಾಗೂ ಸ್ಪಿನ್‌ ವಿಭಾಗದ ಶಿಸ್ತಿನ ದಾಳಿಯ ಕೊರತೆಯಿಂದಾಗಿ ಹದಿಮೂರನೇ ಆವೃತ್ತಿಯ ಏಳನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿದ್ದೇವೆ ಎಂದು ಚೆನ್ನೈ ಸೂಪರ್‌ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್‌ ಧೋನಿ ತಿಳಿಸಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಧೋನಿ, ಬ್ಯಾಟಿಂಗ್ ವಿಭಾಗದಲ್ಲಿ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ. ನಿಧಾನಗತಿಯ ಆರಂಭ ಮತ್ತು ಅದರ ಮುಂದುವರಿಕೆ ಯಾವುದೇ ಬ್ಯಾಟ್ಸ್ ಮನ್ ಮೇಲೂ ಒತ್ತಡ ಹೇರುತ್ತದೆ. ಪ್ರಮುಖವಾಗಿ ನಾವು 160ಕ್ಕೂ ಹೆಚ್ಚು ರನ್ ಗಳ ಗುರಿಯನ್ನು  ಬೆನ್ನು ಹತ್ತುವಾಗ ಆ ಒತ್ತಡ ಇನ್ನೂ ಹೆಚ್ಚಿರುತ್ತದೆ. ಆರಂಭಿಕರು ವಿಫಲರಾದರೆ ಆಗ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಬೀರುತ್ತದೆ. ಈ ಬಗ್ಗೆ ನಾವು ಗಮನ ಹರಿಸಬೇಕು. ಮುಂದಿನ ಪಂದ್ಯಕ್ಕೆ ಅಂಬಾಟಿ ರಾಯುಡು ತಂಡಕ್ಕೆ ಹಿಂದಿರುಗಬಹುದು ಎಂದು ಧೋನಿ ಹೇಳಿದ್ದಾರೆ.  

ಸ್ಪಿನ್ನರ್‌ಗಳ ಫಾರ್ಮ್‌ ತಂಡದ ಪ್ರದರ್ಶನದ ಮೇಲೆ ಪ್ರಭಾವ ಬೀರುತ್ತದೆ: ಫ್ಲೆಮಿಂಗ್‌
ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಚೆನ್ನೈ ಫ್ರಾಂಚೈಸಿಯ ಮುಖ್ಯ ಕೋಚ್‌ ಸ್ಟೀಫೆನ್‌ ಫ್ಲೆಮಿಂಗ್‌, ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಹಾಗೂ ಪಿಯೂಷ್‌ ಚಾವ್ಲಾ ಅವರ ಲಯದಲ್ಲಿ ಇಲ್ಲದೆ ಇರುವುದು ತಂಡದ ಪ್ರದರ್ಶನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.  "ಕಳೆದ 12 ಆವೃತ್ತಿಗಳಿಂದ ಸ್ಪಿನ್‌ ವಿಭಾಗವನ್ನೇ ಪ್ರಮುಖ ಅಸ್ತ್ರವನ್ನಾಗಿಟ್ಟುಕೊಂಡು ಬಂದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಇದೀಗ ಇದೇ ವಿಭಾಗದಲ್ಲಿ ಉಮಟಾಗಿರುವ ಸಮಸ್ಯೆಯನ್ನು ಬಗೆಹರಿಸುವುದು ಪ್ರಮುಖ ಸಂಗತಿಯಾಗಿದೆ. ಆದ್ದರಿಂದ ನಾವು ವಿಭಿನ್ನ ವ್ಯಕ್ತಿತ್ವವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಹಾಗೂ ಸ್ಪಿನ್ ಖಂಡಿತವಾಗಿಯೂ ಒಂದು ಪಾತ್ರವನ್ನು ವಹಿಸುತ್ತದೆ, " ಎಂದು ಹೇಳಿದರು.     

ಇನ್ನು ನಿನ್ನೆಯ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 175 ರನ್‌ಗಳನ್ನು ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ನಿಗದಿತ 20 ಓವರ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು 131 ರನ್‌ಗಳಿಗೆ ಸೀಮಿತವಾಯಿತು. ಅಂತಿಮವಾಗಿ ಡೆಲ್ಲಿ ಫ್ರಾಂಚೈಸಿ 44 ರನ್‌ಗಳ ಗೆಲುವು ಸಾಧಿಸಿತು. 

SCROLL FOR NEXT