ಕ್ರಿಕೆಟ್

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ಮರುನೇಮಕಕ್ಕೆ ದ್ರಾವಿಡ್ ಅರ್ಜಿ; ಟೀಂ ಇಂಡಿಯಾ ಕೋಚ್ ಆಗೋದು ಡೌಟ್!

Srinivasamurthy VN

ನವದೆಹಲಿ: ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗುತ್ತಾರೆ ಎಂಬ ಆಸೆಯಲ್ಲಿ ಕೋಟ್ಯಂತರ ಅಭಿಮಾನಿಗಳಿದ್ದರೆ, ಇತ್ತ ದ್ರಾವಿಡ್ ಮಾತ್ರ ಮತ್ತೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖಸ್ಥರಾಗಿ ಮರುನೇಮಕ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ಹೌದು..  ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖಸ್ಥರಾಗಿ ಮರುನೇಮಕ ಬಯಸಿ ಅರ್ಜಿ ಸಲ್ಲಿಸಿದ್ದು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಹುದ್ದೆಯ ನೇಮಕಕ್ಕಾಗಿ ಈಚೆಗೆ ಅರ್ಜಿ ಆಹ್ವಾನಿಸಿತ್ತು. ಪ್ರಸ್ತುತ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ 2ನೇ ಬಾರಿಗೆ ನೇಮಕ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಆದರೆ,  ಇದುವರೆಗೆ ಅವರನ್ನು ಬಿಟ್ಟು ಬೇರೆ ಯಾರೂ ಅರ್ಜಿ ಹಾಕಿಲ್ಲ. ಹೀಗಾಗಿ ಬಹುತೇಕ ಈ ಸ್ಥಾನ ಅವರಿಗೇ ಸಿಗುವ ಸಾಧ್ಯತೆ ಇದೆ.

‘ರಾಹುಲ್ ದ್ರಾವಿಡ್ ಅವರಿಗೆ ಸರಿಸಮನಾಗಿ ಪೈಪೋಟಿಯೊಡ್ಡುವವರೂ ಕಡಿಮೆ ಇದ್ದಾರೆ. ಆದರೆ, ಅವರು ಎರಡು ವರ್ಷಗಳ ಅವಧಿಯನ್ನು ಈಗಾಗಲೇ ಪೂರೈಸಿದ್ದಾರೆ. ಮುಂದುವರಿಸುವ ನಿಯಮ ಇಲ್ಲ. ಆದ್ದರಿಂದ ಸಂದರ್ಶನ ಪ್ರಕ್ರಿಯೆಯ ಮೂಲಕವೇ ಮರುನೇಮಕವಾಗಬೇಕು. ಆದ್ದರಿಂದ ಆಸಕ್ತರು ಅರ್ಜಿ  ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಲಾಗಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಈಗಾಗಲೇ ಮಂಡಳಿಯು ಅರ್ಜಿ ಸ್ವೀಕಾರದ ಅವಧಿಯನ್ನು ವಿಸ್ತರಿಸಿದೆ. ಅಗಸ್ಟ್ 15ಕ್ಕೆ ಕೊನೆಯ ದಿನವಿತ್ತು. ಈಗ ಕೆಲವು ದಿನಗಳ ವರೆಗೆ ಅವಕಾಶ ನೀಡಿದೆ. ಅದಾಗ್ಯೂ ಬಿಸಿಸಿಐ ಹಾಲಿ ಎನ್​ಸಿಎ (NCA) ಮುಖಸ್ಥರಾಗಿರುವ ದ್ರಾವಿಡ್ ಅವರನ್ನೇ ಮುಂದುವರೆಸುವ ಸಾಧ್ಯತೆಯಿದೆ. ಇದರೊಂದಿಗೆ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

ಇತ್ತೀಚೆಗೆ ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ಕೋಚ್ ಜವಾಬ್ದಾರಿಯನ್ನು ರಾಹುಲ್ ದ್ರಾವಿಡ್ ವಹಿಸಿಕೊಂಡಿದ್ದರು. ಇದರ ಬೆನ್ನಲ್ಲೇ ದ್ರಾವಿಡ್ ಭಾರತ ತಂಡದ ಮುಂದಿನ ಕೋಚ್ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಕೇಳಿದ ಪ್ರಶ್ನೆಗೆ, ಅದರ ಬಗ್ಗೆ ಈಗೇನು ನಾನು ಹೇಳುವುದಿಲ್ಲ. ಲಂಕಾ ಸರಣಿ ವೇಳೆ ನೀಡಲಾದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿ ಇದೆ ಎಂದು ದ್ರಾವಿಡ್ ತಿಳಿಸಿದ್ದರು. ಇದರ ಬೆನ್ನಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥನ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಹೀಗಾಗಿ ಟೀಮ್ ಇಂಡಿಯಾಗೆ ಕೋಚ್ ಆಗಲಿದ್ದಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

SCROLL FOR NEXT