ಕ್ರಿಕೆಟ್

ಏಕದಿನ ನಾಯಕತ್ವ ವಿವಾದ ಕುರಿತು ಕೊಹ್ಲಿ ಆರೋಪ: ಇದನ್ನು ಮುಂದುವರೆಸುವುದು ಬೇಡ ಎಂದ ಗಂಗೂಲಿ!

Nagaraja AB

ಕೊಲ್ಕತ್ತಾ: ಏಕದಿನ ನಾಯಕತ್ವ ಕುರಿತ ವಿವಾದದ ಬಗ್ಗೆ ಮಾತನಾಡಲು ನಿರಾಕರಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಈ ವಿಚಾರವನ್ನು ಮುಂದುವರೆಸುವುದಿಲ್ಲ, ಈ ವಿಷಯದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. 

ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ವಿರಾಟ್ ಕೊಹ್ಲಿ ವಿರುದ್ಧ ಕ್ರಮ ಕೈಗೊಳ್ಳುವಿರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸೌರವ್ ಗಂಗೂಲಿ, ನಾನು ಏನನ್ನೂ ಹೇಳುವುದಿಲ್ಲ, ಇದು ಬಿಸಿಸಿಐ ವಿಚಾರವಾಗಿದೆ. ಅವರಷ್ಟೆ ಇದನ್ನು ಬಗೆಹರಿಸಲಿದ್ದಾರೆ ಎಂದರು. 

ಕೊಹ್ಲಿ ಅವರನ್ನು ಏಕದಿನ ನಾಯಕತ್ವದಿಂದ ಕಿತ್ತುಹಾಕಿದ ನಂತರ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ಗಂಗೂಲಿ, ನಾಯಕತ್ವ ಬದಲಾವಣೆ ಕುರಿತಂತೆ ವಿರಾಟ್ ಕೊಹ್ಲಿ ಅವರ ಜೊತೆ ಮಾತನಾಡಿದ್ದೆ, ಅಲ್ಲದೇ, ಟಿ,-20 ನಾಯಕತ್ವ ತ್ಯಜಿಸದಂತೆ ಮನವಿ ಮಾಡಿಕೊಂಡಿದ್ದೆ ಎಂದು ಹೇಳಿದ್ದರು. 

"ಇದು ಬಿಸಿಸಿಐ ಮತ್ತು ಆಯ್ಕೆದಾರರು ಒಟ್ಟಾಗಿ ತೆಗೆದುಕೊಂಡ ನಿರ್ಧಾರ. ವಾಸ್ತವವಾಗಿ, ಟಿ-20 ನಾಯಕತ್ವದಿಂದ ಕೆಳಗಿಳಿಯದಂತೆ ವಿರಾಟ್‌ಗೆ ಬಿಸಿಸಿಐ ವಿನಂತಿಸಿತ್ತು.  ಆದರೆ  ಅವರು ಒಪ್ಪಲಿಲ್ಲ, ನಂತರ ಏಕದಿನ ಮತ್ತು ಟಿ-20 ಪಂದ್ಯಗಳಿಗೆ ಬೇರೆ ಬೇರೆ ಕ್ಯಾಪ್ಟನ್ ಮಾಡಲು ಆಯ್ಕೆದಾರರು ಒಪ್ಪಲಿಲ್ಲ. ಆದ್ದರಿಂದ ವಿರಾಟ್ ಕೊಹ್ಲಿ ಅವರನ್ನು ಟೆಸ್ಟ್ ಕ್ಯಾಪ್ಟನ್ ಆಗಿ ಮುಂದುವರೆಯಲು ಮತ್ತು ರೋಹಿತ್ ಅವರನ್ನು ಏಕದಿನ ಪಂದ್ಯಗಳ ನಾಯಕರಾಗಿ ನೇಮಿಸಲು ನಿರ್ಧರಿಸಲಾಗಿತ್ತು. ಬಿಸಿಸಿಐ ಅಧ್ಯಕ್ಷನಾಗಿ ವಿರಾಟ್ ಕೊಹ್ಲಿ ಹಾಗೂ ಆಯ್ಕೆದಾರರ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿರುವುದಾಗಿ ಗಂಗೂಲಿ ಹೇಳಿದ್ದರು. 

ಆದಾಗ್ಯೂ, ಬುಧವಾರ ಸುದ್ದಿಗೋಷ್ಠಿ ನಡೆಸಿದ ವಿರಾಟ್ ಕೊಹ್ಲಿ, ಟಿ-20 ನಾಯಕತ್ವ ತೊರೆಯದಂತೆ ನನಗೆ ಬಿಸಿಸಿಐ ಹೇಳಿರಲಿಲ್ಲ.  ನಾಯಕತ್ವದಿಂದ ಕಿತ್ತು ಹಾಕುವ ಸಮಯದಲ್ಲಿ ನಡೆಸಿದ ಮಾತುಕತೆಯೂ ನಿಖರವಾಗಿಲ್ಲ. ಡಿಸೆಂಬರ್  8 ರಂದು ಟೆಸ್ಟ್ ಸರಣಿಗಾಗಿ ನಡೆದ ಆಯ್ಕೆದಾರರ ಸಭೆಗೂ  ಒಂದೂವರೆ ಗಂಟೆಗಳ ಮೊದಲು ನನ್ನನ್ನು ಸಂಪರ್ಕಿಸಲಾಗಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದರು.

SCROLL FOR NEXT