ಕ್ರಿಕೆಟ್

ಚೊಚ್ಚಲ ಪಂದ್ಯದಲ್ಲೇ ಗಂಗೂಲಿಯ 25 ವರ್ಷದ ಹಳೆಯ ದಾಖಲೆ ಉಡೀಸ್; ದ್ವಿಶತಕ ಸಿಡಿಸಿದ ಡೆವೊನ್ ಕಾನ್ವೇ!

Vishwanath S

ಲಂಡನ್: ಲಾರ್ಡ್ಸ್ ನಲ್ಲಿ ನಡೆಯತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಆರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ಅಲ್ಲದೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನು ಮುರಿದರು.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಕಾನ್ವೇ ಈ ಸಾಧನೆ ಮಾಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಅಜೇಯ 136 ರನ್ ಗಳಿಸಿದ್ದು ಇಂಗ್ಲೆಂಡ್ ಬೌಲರ್ ಗಳನ್ನು ಕಾಡಿದರು. ಇನ್ನು 1996ರಲ್ಲಿ ಲಾರ್ಡ್ಸ್‌ನಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಗಂಗೂಲಿ ತಮ್ಮ ಚೊಚ್ಚಲ ಪಂದ್ಯದಲ್ಲಿ 131 ರನ್ ಬಾರಿಸಿದ್ದರು. 200 ರನ್ ಬಾರಿಸುವ ಮೂಲಕ ಕಾನ್ವೇ ಈ ದಾಖಲೆಯನ್ನು ಮುರಿದಿದ್ದಾರೆ. 

ಕುತೂಹಲಕಾರಿ ಸಂಗತಿ ಎಂದರೆ, ಕಾನ್ವೇ ಮತ್ತು ಗಂಗೂಲಿ ಅವರು ಜುಲೈ 8ರಂದೇ ಜನಿಸಿದ್ದಾರೆ. ಈ ಶತಕದೊಂದಿಗೆ ಲಾರ್ಡ್ಸ್‌ನಲ್ಲಿ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದ ಆಂಗ್ಲರೇತರ ಮೂರನೇ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಹ್ಯಾರಿ ಗ್ರಹಾಂ 1893ರಲ್ಲಿ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 107 ರನ್ ಗಳಿಸಿದ್ದರು.

ಏತನ್ಮಧ್ಯೆ, ಮೊದಲ ಟೆಸ್ಟ್ ನಲ್ಲಿ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 378 ರನ್ ಗಳಿಗೆ ಆಲೌಟ್ ಆಗಿದೆ. ನ್ಯೂಜಿಲ್ಯಾಂಡ್ ಪರ ಟಾಮ್ ಲಾಥಮ್ 23, ಕಾನ್ವೇ 200, ಹೆನ್ರಿ ನಿಕೋಲಸ್ 61 ಮತ್ತು ನೈಲ್ ವಾಗ್ನರ್ ಅಜೇಯ 25 ರನ್ ಬಾರಿಸಿದ್ದಾರೆ. 

ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ಒಲ್ಲಿ ರಾಬಿನ್ಸನ್ 4, ಮಾರ್ಕ್ ವುಡ್ 3 ಮತ್ತು ಜೇಮ್ಸ್ ಆಂಡರ್ಸನ್ 2 ವಿಕೆಟ್ ಪಡೆದಿದ್ದಾರೆ. 

SCROLL FOR NEXT