ಕ್ರಿಕೆಟ್

ಐಪಿಎಲ್ 2021: ಕೆಕೆಆರ್ ನ ಇಬ್ಬರು ಆಟಗಾರರಿಗೆ ಕೊರೋನಾ, ಇಂದಿನ ಆರ್ ಸಿಬಿ ವಿರುದ್ಧದ ಪಂದ್ಯ ಮುಂದೂಡಿಕೆ

Manjula VN

ನವದೆಹಲಿ: ಅತಿ ಎಚ್ಚರಿಕೆ ಮತ್ತು ಕಡ್ಡಾಯ ಕೋವಿಡ್ ನಿರ್ಬಂಧಗಳ ಪಾಲನೆಯ ಹೊರತಾಗಿಯೂ ಮಾರಕ ಕೊರೋನಾ ವೈರಸ್ ಐಪಿಎಲ್ ಆಟಗಾರರ ಬಯೋಬಬಲ್ ಬ್ರೇಕ್ ಮಾಡಿದ್ದು, ಕೋಲ್ಕತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರು ಸೋಂಕಿಗೆ ತುತ್ತಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಿನ ಐಪಿಎಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕೆಕೆಆರ್ ತಂಡದ ಇಬ್ಬರು ಆಟಗಾರರಿಗೆ ಕೊರೋನಾ ಸೋಂಕು ಒಕ್ಕರಿಸಿದ್ದು, ಇದು ಇಂದಿನ ಪಂದ್ಯದ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ.  ಮೂಲಗಳ ಪ್ರಕಾರ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಲ್ಲಿ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 

ಈ ಇಬ್ಬರು ಆಟಗಾರರ ಪೈಕಿ ಬಯೋ ಬಬಲ್​ನಲ್ಲಿ ಇರುವ ಓರ್ವ ಕ್ರಿಕೆಟ್ ಆಟಗಾರನಿಗೆ ಕೊವಿಡ್ ಸೋಂಕು ದೃಢಪಟ್ಟಿದೆ ಎಂದು ಹೇಳಲಾಗಿದ್ದು, ಇದು ಇತರೆ ಆಟಗಾರರಿಗೂ ಸೋಂಕಿನ ಭೀತಿ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಅಂದರೆ ಮೇ 3 ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)  ಮತ್ತು ಕೋಲ್ಕತಾ ನೈಟ್ ರೈಡರ್ಸ್ (KKR) ನಡುವೆ ಅಹಮದಾಬಾದ್‌ನಲ್ಲಿ ನಡೆಯಬೇಕಿದ್ದ ಇಂದಿನ ಐಪಿಎಲ್ ಪಂದ್ಯವನ್ನು ಮುಂದೂಡಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಬಿಸಿಸಿಐ ಈ ಸಂಬಂಧ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು  ಹೇಳಲಾಗಿದೆ. 

ಬಯೋಬಬಲ್ ನಲ್ಲಿದ್ದ ಆಟಗಾರರಿಗೆ ಸೋಂಕು ಒಕ್ಕರಿಸಿದ್ದು ಹೇಗೆ?
ಇನ್ನು ಐಪಿಎಲ್ ನಲ್ಲಿ ಪಾಲ್ಗೊಂಡಿರುವ ಎಲ್ಲ ಆಟಗಾರರೂ ಸುರಕ್ಷಿತ ಬಯೋಬಬಲ್ ನಲ್ಲಿದ್ದು, ಎಲ್ಲರನ್ನೂ ಬಾಹ್ಯ ಪ್ರಪಂಚದಿಂದ ದೂರವಿಡಲಾಗಿತ್ತು. ಆದರೆ ಪಂದ್ಯಗಳ ನಡುವೆ ಗಾಯಗಳಿಗೆ ಚಿಕಿತ್ಸೆ ಪಡೆಯಲು, ಸ್ಕ್ಯಾನಿಂಗ್ ಮಾಡಿಸಲು ಹೊರಗೆ ಹೋಗಿದ್ದಾಗ ಇವರಿಬ್ಬರಿಗೂ ಸೋಂಕು ತಗುಲಿರಬಹುದು ಎಂದು  ಹೇಳಲಾಗಿದೆ. 

ಇಂದಿನ ಪಂದ್ಯ ಮುಂದೂಡಿಕೆ!
ಐಪಿಎಲ್‌ಗೆ ಕೊರೊನಾ ಪಿಡುಗು ಅಪ್ಪಳಿಸಿದೆ. ಇಬ್ಬರು ಕ್ರಿಕೆಟಿಗರಿಗೆ ಕೋವಿಡ್ -19 ಪಾಸಿಟಿವ್‌ ದೃಢಪಟ್ಟಿರುವುದರಿಂದ ಸೋಮವಾರ ನಿಗದಿಯಾಗಿದ್ದ ಪಂದ್ಯವನ್ನು ಮುಂದೂಡಲಾಗಿದೆ. ಸೋಮವಾರ ರಾತ್ರಿ 7.30ಕ್ಕೆ ಆರ್‌ಸಿಬಿ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಬೇಕಿತ್ತು. ಆಟಗಾರರಿಗೆ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ಕೋಲ್ಕತಾ ಆಟಗಾರರಾದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಗೆ ವೈರಸ್ ತಗುಲಿರುವದು ದೃಢಪಟ್ಟಿದೆ. ಹಾಗಾಗಿ ಪಂದ್ಯವನ್ನು ಮುಂದೂಡಲಾಗಿದೆ.

ಸಹ ಆಟಗಾರರಿಗೆ ಕೋವಿಡ್ ಪರೀಕ್ಷೆ
ಇನ್ನು ಇಬ್ಬರು ಆಟಗಾರರು ಕೋವಿಡ್ ಸೋಂಕಿಗೆ ತುತ್ತಾದ ಬೆನ್ನಲ್ಲೇ ಕೆಕೆಆರ್ ಫ್ರಾಂಚೈಸಿ ತಂಡದ ಎಲ್ಲ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಲು ಮುಂದಾಗಿದೆ. ಪ್ರಸ್ತುತ ಸೋಂಕಿಗೆ ತುತ್ತಾಗಿರುವ ಇಬ್ಬರು ಆಟಗಾರರನ್ನು ಪ್ರತ್ಯೇಕಿಸಿಡಲಾಗಿದ್ದು, ಕೊಠಡಿಯಲ್ಲಿಯೇ ಚಿಕಿತ್ಸೆ  ನೀಡಲಾಗುತ್ತಿದೆ. ಇದಕ್ಕಾಗಿ ತಂಡದ ವೈದ್ಯಕೀಯ ತಂಡ ಕಾರ್ಯ ಪ್ರವೃತ್ತವಾಗಿದ್ದು, ಸೋಂಕಿತ ಆಟಗಾರರಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಆಟಗಾರರನ್ನು ಪರೀಕ್ಷೆಗೊಳಪಡಿಸಿದೆ ಎನ್ನಲಾಗಿದೆ. 

SCROLL FOR NEXT