ಕ್ರಿಕೆಟ್

ಶ್ರೀಲಂಕಾ ಪ್ರವಾಸ: ರಾಹುಲ್‌ ದ್ರಾವಿಡ್‌ ಮುಖ್ಯಕೋಚ್?

Lingaraj Badiger

ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌, ಇಂಗ್ಲೆಂಡ್‌ ಪ್ರವಾಸಕ್ಕಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ - ಬಿಸಿಸಿಐ ತಂಡವನ್ನು ಕೆಲ ದಿನಗಳ ಹಿಂದೆ ಪ್ರಕಟಿಸಿದೆ. ಇದರೊಂದಿಗೆ ಶ್ರೀಲಂಕಾ ಪ್ರವಾಸಕ್ಕೂ ಮತ್ತೊಂದು ತಂಡವನ್ನು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಘೋಷಿಸಿದ್ದಾರೆ. 

ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವಾಗಲೇ ಮತ್ತೊಂದು ಏಕದಿನ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಈ ತಿಂಗಳ 29 ರಂದು ಇಂಗ್ಲೆಂಡ್‌ ಗೆ ಪ್ರಯಾಣ ಬೆಳೆಸಲಿದೆ.

ನ್ಯೂಜಿಲೆಂಡ್ ವಿರುದ್ಧದ ಡಬ್ಲ್ಯುಟಿಸಿ ಫೈನಲ್ ಪಂದ್ಯ ಮುಗಿದ ತಿಂಗಳ ನಂತರ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಈ ಸಮಯದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಭಾರತ ಏಕದಿನ ತಂಡಕ್ಕೆ ಕೋಚ್ ರವಿಶಾಸ್ತ್ರಿ ಲಭ್ಯವಿರುವುದಿಲ್ಲ. ಇದರಿಂದ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

ಶ್ರೀಲಂಕಾ ವಿರುದ್ಧದ ಪಂದ್ಯಗಳಿಗೆ ರಾಹುಲ್ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಆಗಿ ಕಳುಹಿಸಲು ಬಿಸಿಸಿಐ ಆಲೋಚಿಸುತ್ತಿದೆ ಎಂದು ವರದಿಯಾಗಿದೆ. ಅವರೊಂದಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಗೆ ಸಂಬಂಧಿಸಿದ ಸಿಬ್ಬಂದಿ ಕೂಡ ಶ್ರೀಲಂಕಾ ಪ್ರವಾಸಕ್ಕೆ ಹೋಗುವ ನಿರೀಕ್ಷೆಯಿದೆ.

ಜುಲೈ 13 ರಂದು ಮೊದಲ ಏಕದಿನ
ಶ್ರೀಲಂಕಾದಲ್ಲಿ ನಡೆಯಲಿರುವ ಭಾರತೀಯ ಸೀಮಿತ ಓವರ್‌ ಸರಣಿಗಳಿಗೆ ಸಂಬಂಧಿಸಿದ ಪಂದ್ಯಗಳ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ. ಈ ಪ್ರವಾಸದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ 3 ಏಕದಿನ ಹಾಗೂ 3 ಟಿ 20 ಪಂದ್ಯಗಳು ನಡೆಯಲಿವೆ. ಜುಲೈ 13, 16, 19 ರಂದು ಏಕದಿನ ಪಂದ್ಯಗಳು ... ಜುಲೈ 22, 24, 27 ರಂದು ಟಿ 20 ಪಂದ್ಯಗಳು ನಡೆಯಲಿದೆ. 

ಹಂಬಂಟೋಟ ಮತ್ತು ದಂಬುಲ್ಲಾಗಳನ್ನು ಪಂದ್ಯ ನಡೆಯುವ ಸ್ಥಳಗಳಾಗಿ ಪರಿಗಣಿಸಲಾಗುತ್ತಿದೆ. 2018 ರ ನಿದಾಹಾಸ್ ಟ್ರೋಫಿ ನಂತರ ಭಾರತ ತಂಡ ಶ್ರೀಲಂಕಾದಲ್ಲಿ ಆಡಿಲ್ಲ.

SCROLL FOR NEXT