ಕ್ರಿಕೆಟ್

ಕೊರೋನಾ ಮಣಿಸಿದ ವೃದ್ಧಿಮಾನ್‌ ಸಾಹ, ಸದ್ಯದಲ್ಲಿಯೇ ಭಾರತ ತಂಡ ಸೇರಲಿರುವ ವಿಕೆಟ್‌ಕೀಪರ್‌

Vishwanath S

ಮುಂಬೈ: ಟೀಂ ಇಂಡಿಯಾದ ಹಿರಿಯ ವಿಕೆಟ್‌ಕೀಪರ್‌, ಬ್ಯಾಟ್ಸ್‌ಮನ್‌ ವೃದ್ದಿಮಾನ್ ಸಾಹ ಕೋವಿಡ್ ಸಾಂಕ್ರಾಮಿಕದ ವಿರುದ್ದ ಜಯಸಾಧಿಸಿದ್ದಾರೆ.     

ಕೋವಿಡ್‌ ಸೋಂಕಿನಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮತ್ತೆ ಕೊಹ್ಲಿ ಪಡೆ ಸೇರುವ ನಿರೀಕ್ಷೆಯಿದೆ. ಸುಮಾರು 17 ದಿನಗಳ ನಂತರ ಅವರಿಗೆ ಕೊರೋನಾ ನೆಗೆಟಿವ್‌ ವರದಿ ಬಂದಿದೆ. 

ಇಂಡಿಯನ್ ಪ್ರೀಮಿಯರ್ ಲೀಗ್ ಅನಿರ್ಧಿಷ್ಟವಾಗಿ ಮುಂದೂಡುವ ಮುನ್ನವೇ ಸಾಹ ಅವರಿಗೆ ಕೊರೋನಾ ಪಾಸಿಟಿವ್‌ ಕಂಡು ಬಂದಿತ್ತು. ಇದರ ಪರಿಣಾಮ ಮೇ 4ರ ಮುಂಬೈ ಇಂಡಿಯನ್ಸ್ ಹಾಗೂ ಸನ್‌ ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯವನ್ನು ಮುಂದೂಡಲಾಯಿತು.

ಆದರೆ, ಸಾಹ ಅವರಲ್ಲಿ ರೋಗಲಕ್ಷಣಗಳಿದ್ದ ಕಾರಣ ದೆಹಲಿಯಲ್ಲಿ ಐಸೋಲೇಷನ್‌ನಲ್ಲಿದ್ದರು. ಪಂದ್ಯಾವಳಿಯನ್ನು ಮುಂದೂಡಿದ ನಂತರ ಅವರು ಕೋಲ್ಕತ್ತಾಗೆ ಬಂದು ಕ್ವಾರಂಟೈನ್‌ ನಲ್ಲಿದ್ದರು. ಇದೇ ಸಮಯದಲ್ಲಿ ಬಿಸಿಸಿಐ ಆಯ್ಕೆದಾರರು ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ತಂಡವನ್ನು ಘೋಷಿಸಿದರು. ವೃದ್ಧಿಮಾನ್‌ ತಮ್ಮ ಫಿಟ್‌ನೆಸ್ ಸಾಬೀತುಪಡಿಸಿದರೆ ಇಂಗ್ಲೆಂಡ್‌ಗೆ ಹೋಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. 

ಎರಡು ದಿನಗಳ ಹಿಂದೆ ನಡೆಸಿದ ಎರಡು ಆರ್‌ಟಿಪಿಸಿಆರ್ ಪರೀಕ್ಷೆಗಳಲ್ಲಿ ಒಂದರಲ್ಲಿ ಪಾಸಿಟಿವ್‌, ಒಂದರಲ್ಲಿ ನೆಗೆಟಿವ್‌ ಬಂದಿದೆ. ಹಾಗಾಗಿ ತಂಡದ ಸೇರ್ಪಡೆ ಸಂದಿಗ್ಧ ಮೂಡಿದೆ.  ಪಾಸಿಟಿವ್‌ ಬಂದಿದ್ದರೂ ಕ್ವಾರಂಟೈನ್‌  ಬ್ರೇಕ್‌ ಮಾಡಿದ್ದಾರೆ ಎಂಬ ವದಂತಿಗಳು ಹರಡಿವೆ. ಆದರೆ ಅವುಗಳನ್ನು ಸಾಹ ನಿರಾಕರಿಸಿದ್ದಾರೆ. ಇನ್ನೂ ಕ್ವಾರಂಟೈನ್‌ನಲ್ಲಿಯೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.

SCROLL FOR NEXT