ಕ್ರಿಕೆಟ್

ಟಿ20 ವಿಶ್ವಕಪ್: ಪಾಕ್ ಗೆ ಮತ್ತೆ ನಾಕೌಟ್ ಹಾರ್ಟ್ ಬ್ರೇಕ್; 34 ವರ್ಷಗಳಿಂದ ಆಸಿಸ್ ಅಜೇಯ ದಾಖಲೆ ಮುಂದುವರಿಕೆ

Srinivasamurthy VN

ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಹಂತದಲ್ಲಿ ಆಸ್ಚ್ರೇಲಿಯಾ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿರುವ ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ಹಳೆಯ ಹೀನಾಯ ದಾಖಲೆಯೊಂದನ್ನು ಮುಂದುವರೆಸಿದೆ.

ಹೌದು.. ನಿನ್ನೆ ದುಬೈ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಸಿಸಿ ಟೂರ್ನಿಗಳಲ್ಲಿ ನಾಕೌಟ್ ಹಂತದಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಅಜೇಯ ದಾಖಲೆಯನ್ನು ಮುಂದುವರೆಸಿದೆ.

ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಐಸಿಸಿ ಟೂರ್ನಿಯಲ್ಲಿ ಮೊದಲ ಬಾರಿಗೆ ಸೆಮೀ ಪೈನಲ್ ನಲ್ಲಿ ಎದುರಾಗಿದ್ದು 1987ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ.. ಆ ಪಂದ್ಯವನ್ನು ಆಸ್ಚ್ರೇಲಿಯಾ 18 ರನ್ ಗಳ ಅಂತರದಲ್ಲಿ ಗೆದ್ದು ಬೀಗಿತ್ತು. ಬಳಿಕ 1999ರ ವಿಶ್ವಕಪ್ ಟೂರ್ನಿಯಲ್ಲಿ ಮತ್ತೆ ಪಾಕಿಸ್ತಾನ- ಆಸ್ಟ್ರೇಲಿಯಾ ತಂಡಗಳು ಸೆಮೀಸ್ ನಲ್ಲಿ ಎದುರಾದವು. ಆಗಲೂ ಕೂಡ ಆಸ್ಟ್ರೇಲಿಯಾ ತಂಡ 8 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿತ್ತು. 

ಬಳಿಕ 2010ರಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ನಲ್ಲಿ ಮತ್ತೆ ಪಾಕಿಸ್ತಾನವನ್ನು ಆಸ್ಟ್ರೇಲಿಯಾ 3 ವಿಕೆಟ್ ಗಳಿಂದ ಮಣಿಸಿ ಪೈನಲ್ ಗೇರಿತ್ತು. ಇದಾದ ಬಳಿಕ 2015ರ ಏಕದಿನ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ನಲ್ಲಿ 6 ವಿಕೆಟ್ ಗಳಿಂದ ಪಾಕಿಸ್ತಾನವನ್ನು ಮಣಿಸಿ ಸೆಮೀಸ್ ಗೇರಿತ್ತು. 

ಇದೀಗ ಮತ್ತೆ ಇತಿಹಾಸ ಮರುಕಳಿಸಿದ್ದು, ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ 5 ವಿಕೆಟ್ ಗಳಿಂದ ಪಾಕಿಸ್ತಾನವನ್ನು ಮಣಿಸಿ ಆಸಿಸ್ ಫೈನಲ್ ಗೇರಿದೆ. ಇದೇ ಭಾನುವಾರ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

SCROLL FOR NEXT