ಕ್ರಿಕೆಟ್

ಮೊದಲ ಟೆಸ್ಟ್: ನ್ಯೂಜಿಲೆಂಡ್ ಭರ್ಜರಿ ಬ್ಯಾಟಿಂಗ್, 2ನೇ ದಿನದಾಟ ಅಂತ್ಯಕ್ಕೆ ಕಿವೀಸ್ ಪಡೆ 129/0

Srinivasamurthy VN

ಕಾನ್ಪುರ: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದು, 2ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 129 ರನ್ ಗಳಿಸಿದೆ.

ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನ ಎರಡನೇ ದಿನದಾಟದಂತ್ಯಕ್ಕೆ ಕಿವೀಸ್ ಪಡೆ ವಿಕೆಟ್ ನಷ್ಟವಿಲ್ಲದೆ 129 ರನ್ ಕಲೆಹಾಕಿದೆ. ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್‌ 345ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರರಾದ ಟಾಮ್ ಲಥಾಮ್ (50 ರನ್) ಹಾಗೂ ವಿಲ್ ಯಂಗ್ (75 ರನ್) ಕಿವೀಸ್ ಗೆ ಅತ್ಯುತ್ತಮ ಆರಂಭ ಒದಗಿಸಿದರು. ಈ ಜೋಡಿ ಟೀಂ ಇಂಡಿಯಾ ಬೌಲರ್ ಗಳನ್ನು ದಂಡಿಸಿ ದಾಖಲೆಯ ಶತಕದ ಜೊತೆಯಾಟವಾಡಿದರು.

ಅಂತೆಯೇ ವಿಲ್ ಲಾಥಮ್, ಟೆಸ್ಟ್‌ ಕ್ರಿಕೆಟ್‌ನಲ್ಲಿ 21ನೇ ಅರ್ಧಶತಕ ದಾಖಲಿಸಿದರು. ಅತ್ಯಂತ ತಾಳ್ಮೆಯಿಂದ ಟೀಂ ಇಂಡಿಯಾ ಬೌಲರ್‌ಗಳನ್ನ ಎದುರಿಸಿದ ಟಾಮ್ ಲಥಾಮ್ 165 ಎಸೆತಗಳಲ್ಲಿ ಅಜೇಯ 50 ರನ್ ಕಲೆಹಾಕಿದರು. ಲಥಾಮ್ ಜೊತೆಗೆ ಸ್ವಲ್ಪ ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸಿದ ವಿಲ್‌ ಯಂಗ್ ತಮ್ಮ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅತ್ಯಂತ ಆತ್ಮವಿಶ್ವಾಸದಲ್ಲಿ ಬ್ಯಾಟಿಂಗ್ ಪ್ರದರ್ಶಿಸಿದರು. 180 ಎಸೆತಗಳನ್ನು ಎದುರಿಸಿದ ವಿಲ್ ಯಂಗ್, 75ರನ್ ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇತ್ತ ಟೀಂ ಇಂಡಿಯಾ ಪರ ಇಶಾಂತ್ ಶರ್ಮಾ, ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಒಟ್ಟು ಐದು ಮಂದಿ ಬೌಲರ್ ಗಳನ್ನು ಬಳಸಿಕೊಂಡರೂ ವಿಕೆಟ್ ಪಡೆಯುವಲ್ಲಿ ಪ್ರಯೋಜನವಾಗಲಿಲ್ಲ. ಎರಡು ಬಾರಿ ಲಾಥಮ್ ರನ್ನು ಔಟ್ ಮಾಡಿದರೂ ರಿವ್ಯೂನಲ್ಲಿ ಅದು ನಾಟೌಟ್ ಆಗಿತ್ತು. ಒಟ್ಟಾರೆ 2ನೇ ದಿನದಾಟದಲ್ಲಿ ನ್ಯೂಜಿಲೆಂಡ್ ತಂಡ ಸಂಪೂರ್ಣವಾಗಿ ಭಾರತ ಮೇಲೆ ಸವಾರಿ ಮಾಡಿತು.

SCROLL FOR NEXT