ಕ್ರಿಕೆಟ್

ಭಾರತ- ಪಾಕ್ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಟೂರ್ನಿ ಸದ್ಯಕ್ಕೆ ಅಸಾಧ್ಯ: ಪಿಸಿಬಿ ನೂತನ ಅಧ್ಯಕ್ಷ

Nagaraja AB

ಲಾಹೋರ್:  ಸದ್ಯಕ್ಕೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಟೂರ್ನಿ ಆಯೋಜನೆ ಸಾಧ್ಯವಿಲ್ಲ. ಈ ಕುರಿತು ಆತುರದ ನಿರ್ಧಾರದ ತೆಗೆದುಕೊಳ್ಳುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೂತನ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ  ಹಂತದಲ್ಲಿ ದೇಶಿ ಕ್ರಿಕೆಟ್ ನತ್ತ ಮಾತ್ರ  ಗಮನ ಹರಿಸುವುದಾಗಿ ತಿಳಿಸಿದ್ದಾರೆ.

ಪಿಸಿಬಿ ಅಧ್ಯಕ್ಷ ನಿಭಾಯಿಸುವುದು ಸವಾಲಿನ ಕೆಲಸಗಳಲ್ಲಿ ಒಂದಾಗಿದೆ. ಭಾರತ- ಪಾಕಿಸ್ತಾನ ತಂಡಗಳ ನಡುವಣ ಕ್ರಿಕೆಟ್ ಪುನರಾರಂಭ ಸದ್ಯಕ್ಕೆ ಸಾಧ್ಯವಿಲ್ಲ. ಏಕೆಂದರೆ ರಾಜಕೀಯದ ನಡುವೆ ಕ್ರಿಕೆಟ್ ನಲುಗಿದೆ ಎಂದರು.

ದುಬೈನಲ್ಲಿ ಅಕ್ಟೋಬರ್ 24 ರಂದು ನಿಗದಿಯಾಗಿರುವ  ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಭಾರತ- ಪಾಕಿಸ್ತಾನ ನಡುವಣ ಪಂದ್ಯ ಕುರಿತಂತೆ ಪ್ರತಿಕ್ರಿಯಿಸಿದ ರಾಜಾ, ಈ ಬಾರಿ ಉತ್ತಮ ರೀತಿಯ ಪ್ರದರ್ಶನ ನೀಡುವಂತೆ ಪಾಕಿಸ್ತಾನ ತಂಡದ ಆಟಗಾರರಿಗೆ ಹೇಳಿರುವುದಾಗಿ ತಿಳಿಸಿದರು.

ತಂಡದ ಉಳಿಯುವ ಬಗ್ಗೆ ಆತಂಕಪಡಬಾರದು, ಭಯಮುಕ್ತಾಗಿ ಕ್ರಿಕೆಟ್ ಆಡುವಂತೆ ಆಟಗಾರರಿಗೆ ತಿಳಿಸಿರುವುದಾಗಿ ಹೇಳಿದ ರಾಜಾ, ಪಾಕ್ ಆಟಗಾರರಲ್ಲಿನ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ ಎಂದರು. 1894ರಿಂದ 1997ರವರೆಗೂ ಪಾಕಿಸ್ತಾನದ 18 ಟೆಸ್ಟ್ ಮತ್ತು 12 ಏಕದಿನ ಪಂದ್ಯಗಳ ನಾಯಕರಾಗಿದ್ದ ರಾಜಾ, 255 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 8,674 ರನ್ ಹೊಂದಿದ್ದಾರೆ. 

SCROLL FOR NEXT