ಕ್ರಿಕೆಟ್

2ನೇ ಟೆಸ್ಟ್: ಬಾಂಗ್ಲಾವನ್ನು 227ಕ್ಕೆ ಕಟ್ಟಿಹಾಕಿ ಮೈಲುಗೈ ಸಾಧಿಸಿದ ಭಾರತ; ದಿನದಂತ್ಯಕ್ಕೆ ಟೀಂ ಇಂಡಿಯಾ 19/0!

Vishwanath S

ಮೀರ್ಪುರ್: ಅತಿಥೇಯ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಅಜೇಯ 19 ರನ್ ಪೇರಿಸಿದೆ. 

ಮೀರ್ಪುರದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಬಾಂಗ್ಲಾದೇಶಕ್ಕೆ ಭಾರತೀಯ ಬೌಲರ್ ಗಳು ಮಾರಕರಾಗಿದ್ದು 227 ರನ್ ಗಳಿಗೆ ಆಲೌಟ್ ಆಯಿತು. ನಂತರ ಇನ್ನಿಂಗ್ಸ್ ಆರಂಭಿಸಿದ ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದೆ. ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ ಅಜೇಯ 3 ರನ್ ಹಾಗೂ ಶುಭ್ಮನ್ ಗಿಲ್ ಅಜೇಯ 14 ರನ್ ಪೇರಿಸಿದ್ದು ಎರಡನೇ ದಿನದಾಟವನ್ನು ಆರಂಭಿಸಲಿದ್ದಾರೆ.

ಬಾಂಗ್ಲಾ ಬ್ಯಾಟರ್ ನಜ್ಮುಲ್ ಶಾಂಟೋರನ್ನು ಅಶ್ವಿನ್ 24 ರನ್ ಗಳಿಗೆ ಎಲ್ ಬಿಡಬ್ಲ್ಯೂ ಮಾಡಿದರು. ನಂತರ 15 ರನ್ ಗಳಿಸಿದ್ದ ಝಾಕೀರ್ ಹಸನ್ ರನ್ನು ಉನಾದ್ಕತ್ ಔಟ್ ಮಾಡಿದರು. ಈ ವೇಳೆ ಬಾಂಗ್ಲಾಗೆ ಆಸರೆಯಾಗಿದ್ದು ಮೊಮಿನೂಲ್ ಹಕ್ ಅಜೇಯ 84 ರನ್ ಪೇರಿಸಿದ್ದು ತಂಡ ಅಲ್ಪಮೊತ್ತಕ್ಕೆ ಆಲೌಟ್ ಆಗುವುದರಿಂದ ತಪ್ಪಿಸಿದರು. ಇನ್ನು ನಾಯಕ ಶಕೀಬ್ ಹಲ್ ಹಸನ್ 16, ಮುಷ್ಫಿಕರ್ ರಹೀಮ್ 26, ಲಿಟನ್ ದಾಸ್ 25, ಮೆಹದಿ ಹಸನ್ 15 ಹಾಗೂ ನೂರುಲ್ ಹಸನ್ 6  ರನ್ ಗಳಿಸಿ ಔಟಾಗಿದ್ದಾರೆ. 

ಇನ್ನು ಭಾರತದ ಪರ ಬೌಲಿಂಗ್ ನಲ್ಲಿ ಉಮೇಶ್ ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 4 ವಿಕೆಟ್ ಪಡೆದಿದ್ದರೆ ಜಯದೇವ್ ಉನಾದ್ಕತ್ 2 ವಿಕೆಟ್ ಪಡೆದಿದ್ದಾರೆ.

ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿ ಮುಂದುವರೆಯಬೇಕಾದರೆ ಈ ಪಂದ್ಯವನ್ನು ಗೆಲ್ಲಲೆಬೇಕಿದೆ. 

SCROLL FOR NEXT