ಕ್ರಿಕೆಟ್

ಪಿಸಿಬಿ ಹೊಸ ಆಡಳಿತ ಸಮಿತಿಯಿಂದ ಕಿರುಕುಳ: ರಮೀಜ್ ರಾಜಾ

Nagaraja AB

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಸ್ಥಾನದಿಂದ ಹಿರಿಯ ಆಟಗಾರ ರಮೀಜ್ ರಾಜಾ ನಿರ್ಗಮನದ ನಂತರ ಮಂಡಳಿಯ ಹೊಸ ಆಡಳಿತ ಸಮಿತಿ ಮತ್ತು ಮಾಜಿ ಅಧ್ಯಕ್ಷರ ನಡುವೆ ಮಾತಿನ ಸಮರ ನಡೆದಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಿಸಿಬಿ ಎಚ್ಚರಿಕೆ ನೀಡಿದೆ.  

ಕಳೆದ ಗುರುವಾರ, ಪಿಸಿಬಿ ಅಧ್ಯಕ್ಷ ಸ್ಥಾನದಿಂದ ರಾಜಾ ಅವರನ್ನು ತೆಗೆದು ಹಾಕಿದ ಸರ್ಕಾರ, ಮುಂದಿನ ನಾಲ್ಕು ತಿಂಗಳ ಕಾಲ ಆಟದ ವ್ಯವಹಾರಗಳನ್ನು ನಡೆಸಲು ನಜಮ್ ಸೇಥಿ ನೇತೃತ್ವದ 14 ಸದಸ್ಯರ ಸಮಿತಿಯನ್ನು ನೇಮಿಸಿತು. ಇದರಿಂದ ಕೋಪಗೊಂಡಿರುವ ರಮೀಜ್ ರಾಜಾ, ಕಚೇರಿಯಿಂದ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಸಹ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. 

"ನಜಮ್ ಸೇಥಿ ರಾತ್ರಿ 2 ಗಂಟೆಗೆ ರಮೀಜ್ ರಾಜಾ ಔಟ್ ಆಗಿದ್ದಾರೆ ಎಂದು ಟ್ವೀಟ್ ಮಾಡುತ್ತಾರೆ. ಇದು ಮಾಜಿ ನಾಯಕನಿಗೆ ಕೊಡುವ ಗೌರವವೇ? ಕಚೇರಿಗೆ ಹೋಗಿ ನನ್ನ ವಸ್ತುಗಳನ್ನು ಸಂಗ್ರಹಿಸಲು ಸಹ ಅನುಮತಿಸಲಿಲ್ಲ ಎಂದು ರಮೀಜ್ ಸೋಮವಾರ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಬೆಳಿಗ್ಗೆ ನನ್ನನ್ನು ತೆಗೆದುಹಾಕುವ ಘೋಷಣೆ ಮಾಡಿದ ನಂತರ ಸುಮಾರು 17 ಜನರು ಪಿಸಿಬಿ ಕಚೇರಿಗಳನ್ನು ತಮ್ಮ ಮಾಲೀಕತ್ವದವರಂತೆ ನಡೆಸುತ್ತಿದ್ದರು. "ನಾನೇನು ಅಪರಾಧ ಮಾಡಿದ್ದೇನೆ? ಇದು ಏನು ತಮಾಷೆಯೇ ಎಂದು ಪ್ರಶ್ನಿಸಿದರು.  ಕೆಲವು ಜನರು ಎಂಜಾಯ್ ಮಾಡಲು, ಪ್ರಚಾರಕ್ಕೆ ಬಂದಿದ್ದಾರೆ. ಅವರಿಗೆ ಕ್ರಿಕೆಟ್ ಬಗ್ಗೆ ಏನೂ ಗೊತ್ತಿಲ್ಲ ಎಂದು ಅವರು ಹೇಳಿದರು. 

ಅಧಿಕಾರಕ್ಕೆ ಬಂದಿರುವ ಹೊಸ ಸಮಿತಿಯಿಂದ ಪಾಕಿಸ್ತಾನ ಕ್ರಿಕೆಟ್‌ಗೆ ಒಳ್ಳೆಯದನ್ನು ಯಾರೂ ಕೂಡಾ ನಿರೀಕ್ಷಿಸಲು ಸಾಧ್ಯವಿಲ್ಲ. ಸಮಿತಿಯು ಪಾಕಿಸ್ತಾನದ ಡ್ರೆಸ್ಸಿಂಗ್ ರೂಮ್‌  ಪರಿಸರವನ್ನು ನಾಶಪಡಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ರಮಿಜ್ ಆರೋಪಿಸಿದ್ದಾರೆ.  ರಮಿಜ್ ಅವರನ್ನು ಕ್ರೀಡಾಂಗಣಕ್ಕೆ ಪ್ರವೇಶಿಸುವುದನ್ನು ಎಂದಿಗೂ ನಿಲ್ಲಿಸಿಲ್ಲ ಮತ್ತು ಅವರ ವಸ್ತುಗಳನ್ನು ಬುಧವಾರ ಅವರಿಗೆ ಹಿಂತಿರುಗಿಸಲಾಗುವುದು ಎಂದು ಪಿಸಿಬಿ ಹೇಳಿದೆ. 

SCROLL FOR NEXT