ಕ್ರಿಕೆಟ್

ನಾವೇನು ಭಾರತದ ಸೇವಕರೇ?- ರಮೀಜ್ ರಾಜ; ಬಿಸಿಸಿಐ 'ಶಾ'ಕ್ ಗೆ ನಲುಗಿದ ಪಾಕ್ ಕ್ರಿಕೆಟ್ ಮಂಡಳಿ

Srinivas Rao BV

ಇಸ್ಲಾಮಾಬಾದ್: ಕೇವಲ ರಾಜಕೀಯ, ವಿದೇಶಾಂಗ ವ್ಯವಹಾರಗಳಲ್ಲಷ್ಟೇ ಅಲ್ಲದೇ ಕ್ರೀಡೆಯ ವಿಷಯದಲ್ಲೂ ಪಾಕಿಸ್ತಾನ ಮೂಲೆಗುಂಪಾಗುವ ಭೀತಿ ಎದುರಿಸುತ್ತಿದೆ. 

ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಗೊಳಿಸುತ್ತಿರುವ ಭಾರತ ಕ್ರಿಕೆಟ್ ನಲ್ಲೂ ಪಾಕ್ ಕ್ರಿಕೆಟ್ ಮಂಡಳಿಯನ್ನು ಏಕಾಂಗಿಗೊಳಿಸುತ್ತಿದೆ. 2023 ರಲ್ಲಿ ಏಷ್ಯಾ ಕಪ್ ಟೂರ್ನಮೆಂಟ್  ಪಾಕಿಸ್ತಾನದಲ್ಲಿ ನಡೆದರೆ ಅದರಲ್ಲಿ ಭಾರತ ಭಾಗಿಯಾವುದಿಲ್ಲ ಎಂದು ಬಿಸಿಸಿಐ ನ ಕಾರ್ಯದರ್ಶಿ ಜಯ್ ಶಾ ಇತ್ತೀಚೆಗಷ್ಟೇ ಹೇಳಿದ್ದರು. ಅಷ್ಟೇ ಅಲ್ಲದೇ ಟೂರ್ನಮೆಂಟ್ ನಡೆಯಲು ಉಭಯ ದೇಶಗಳಿಗೂ ಒಪ್ಪಿಗೆಯಾಗುವ ಯಾವುದಾದರೂ ತಟಸ್ಥ ದೇಶವನ್ನು ಆಯ್ಕೆ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು.

ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಶಾ ಅವರ ಈ ಘೋಷಣೆ ಈಗ ಪಾಕ್ ಕ್ರಿಕೆಟ್ ಮಂಡಳಿಯನ್ನು ಕಂಗಾಲಾಗಿಸಿದೆ ಹಾಗೂ ತಾನೂ ಭಾರತಕ್ಕೇನು ಕಮ್ಮಿ ಇಲ್ಲ ಎಂಬುದನ್ನು ತೋರಿಸಿಕೊಳ್ಳುವುದಕ್ಕಾಗಿ ಏಷ್ಯಾ ಕಪ್ ನಡೆದ ಬಳಿಕ ಭಾರತದಲ್ಲಿ ನಡೆಯಲಿರುವ ಒಡಿಐ ವಿಶ್ವಕಪ್ ನಲ್ಲಿ ತಾನೂ ಭಾಗವಹಿಸುವುದಿಲ್ಲ ಎಂಬ ಮಾತುಗಳನ್ನು ಆಡತೊಡಗಿದೆ. 

ಈ ವಿಷಯವಾಗಿ ಮಾತನಾಡಿರುವ ಪಿಸಿಬಿಯ ಮಾಜಿ ಅಧ್ಯಕ್ಷ ರಮೀಜ್ ರಾಜ, ಈ ಹಿಂದೆ ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ಅನ್ಯ ರಾಷ್ಟ್ರಗಳ ಕ್ರಿಕೆಟ್ ತಂಡಗಳು ಆಡಲು ನಿರಾಕರಿಸಿದ್ದು ಹಾಗೂ ಅದರ ನಂತರದ ಪರಿಣಾಮಗಳನ್ನು ಉಲ್ಲೇಖಿಸಿ, ಭಾರತದ ಬೇಡಿಕೆಗಳಿಗೆ ಪಿಸಿಬಿ ಸದಸ್ಯರು ಮಣಿಯಬಾರದು ಹಾಗೂ ಮಂಡಳಿಯ ಸದಸ್ಯರು ನಾಯಕತ್ವ ಪ್ರದರ್ಶಿಸಬೇಕು ಎಂದು ರಮೀಜ್ ರಾಜ ಹೇಳಿದ್ದಾರೆ. 

ನಾಯಕತ್ವ ಎಂದರೇನು? ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪಾಕಿಸ್ತಾನಕ್ಕೆ ಟೂರ್ನಿ ಆಯೋಜಿಸಲು ಹೇಳಿದ್ದರೆ, ಭಾರತ ಪಾಕಿಸ್ತಾನಕ್ಕೆ ಬರುವುದಿಲ್ಲ ಟೂರ್ನಿಯನ್ನೇ ತಟಸ್ಥ ಪ್ರದೇಶಕ್ಕೆ ವರ್ಗಾವಣೆ ಮಾಡಿ ಎಂದು ಕೇಳಿದರೆ ನಮ್ಮ ಪ್ರತಿಕ್ರಿಯೆ ಯಾವ ರೀತಿ ಇರಬೇಕು? ಅವರು ಕ್ರಿಕೆಟ್ ನಲ್ಲಿ ಜಾಗತಿಕ ಶಕ್ತಿಯಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ನಾವೇನು ಭಾರತದ ಸೇವಕರೇ? ಅವರು ಹೇಳಿದ್ದೆಲ್ಲಾ ಕೇಳಬೇಕೇ? ಎಂದು ರಮೀಜ್ ರಾಜ ನಖಶಿಖಾಂತ ಉರಿದುಕೊಂಡು ಹೇಳಿದ್ದಾರೆ. 

ರಮೀಜ್ ರಾಜ ಪ್ರಕಾರ ಪಾಕಿಸ್ತಾನದ ಕ್ರಿಕೆಟ್ ತಂಡ ಹಾಗೂ ಅಭಿಮಾನಿಗಳು ಈಗ ಸಿಗುತ್ತಿರುವುದಕ್ಕಿಂತಲೂ ಹೆಚ್ಚಿನ ಗೌರವಕ್ಕೆ ಅರ್ಹರಾಗಿದ್ದಾರೆ.

ಇದು ಹೀಗೆಯೇ ಮುಂದುವರೆದರೆ ನಾವು ಮೂಲೆಗುಂಪಾಗುತ್ತೇವೆ, ನಾವು ಸರ್ಕಾರದಿಂದ ಅನುಮತಿ ಪಡೆದು ಮುಂದಿನ ನಡೆ ಏನು ಎಂಬುದನ್ನು ನಿರ್ಧರಿಸುತ್ತೇವೆ. ಸದ್ಯದ ಸ್ಥಿತಿಯಲ್ಲಿ ಪಿಸಿಬಿಯದ್ದು ಒಳ್ಳೆಯ ನಾಯಕತ್ವದ ಲಕ್ಷಣಗಳಲ್ಲ, ಪಾಕಿಸ್ತಾನ ತಂಡ ಉತ್ತಮವಾಗಿದೆ. ಒಳ್ಳೆಯ ಆಟಗಾರರಿದ್ದಾರೆ, ಅವರು ಈಗ ಸಿಗುತ್ತಿರುವ ಗೌರವಾದರಗಳಿಗಿಂತ ಹೆಚ್ಚು ಪಡೆಯುವುದಕ್ಕೆ ಅರ್ಹರು ಎಂದು ರಮೀಜ್ ರಾಜ ಹೇಳಿದ್ದಾರೆ.

SCROLL FOR NEXT