ಕ್ರಿಕೆಟ್

5ನೇ ಟೆಸ್ಟ್: ಭಾರತದ ವಿರುದ್ಧ ದಾಖಲೆಯ ರನ್ ಚೇಸ್ ಮಾಡಿದ ಇಂಗ್ಲೆಂಡ್, ಸರಣಿ ಸಮಬಲ

Srinivasamurthy VN

ಎಡ್ಜ್ ಬ್ಯಾಸ್ಟನ್: ಭಾರತದ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೃಹತ್ ರನ್ ಚೇಸ್ ನಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿದ್ದು 7 ವಿಕೆಟ್ ಗಳ ಅಂತರದ ಭರ್ಜರಿ ಜಯ ದಾಖಲಿಸಿದೆ.

ಬರ್ಮಿಂಗ್ಹ್ಯಾಮ್ ಎಡ್ಜ್ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಭಾರತ ತಂಡ 7 ವಿಕೆಟ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿದೆ.

ಭಾರತ ನೀಡಿದ 378ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಕೇವಲ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಗುರಿ ಸಾಧಿಸಿದೆ. ಇಂಗ್ಲೆಂಡ್ ಗೆಲುವಿನಲ್ಲಿ ಜೋ ರೂಟ್ (142 ರನ್) ಮತ್ತು ಜಾನಿ ಬೇರ್ ಸ್ಚೋವ್  (114 ರನ್) ನಿರ್ಣಾಯಕ ಪಾತ್ರವಹಿಸಿದರು. ಮೊದಲ ಇನ್ನಿಂಗ್ಸ್ ನ ಹಿನ್ನಡೆ ಹೊರತಾಗಿಯೂ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ವಿರುದ್ಧ ತಿರುಗಿ ಬಿದ್ದ ಇಂಗ್ಲೆಂಡ್ ದಾಂಡಿಗರು ಅಕ್ಷರಶಃ ಭಾರತ ಬೌಲರ್ ಗಳ ಮೇಲೆ ಸವಾರಿ ಮಾಡಿದರು. 

ಆರಂಭಿಕರಾಗಿ ಕಣಕ್ಕಿಳಿದ ಅಲೆಕ್ಸ್ ಲೀಸ್ 66ರನ್ ಸಿಡಿಸಿದರೆ, ಮತ್ತೋರ್ವ ಆರಂಭಿಕ ಆಟಗಾರ ಜ್ಯಾಕ್ ಕ್ರಾಲಿ 46 ರನ್ ಚಚ್ಚಿದರು. ಈ ಹಂತದಲ್ಲಿ ಬುಮ್ರಾ ಕ್ರಾಲಿ ಮತ್ತು ಓಲಿ ಪೋಪ್ ರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಬ್ರೇಕ್ ನೀಡಿದರಾದರೂ, ಈ ಹಂತದಲ್ಲಿ ಜೊತೆಗೂಡಿದ ಜೋ ರೂಟ್ ಮತ್ತು ಜಾನಿ ಬೇರ್ ಸ್ಟೋವ್ ಭಾರತಕ್ಕೆ ಯಾವುದೇ ರೀತಿಯ ಅವಕಾಶ ನೀಡದೇ ದಾಖಲೆಯ ರನ್ ಚೇಸ್ ನಲ್ಲಿ ಪಾಲ್ಗೊಂಡು ಜಯ ತಂದಿತ್ತರು.

ಆ ಮೂಲಕ ಭಾರತದ ವಿರುದ್ಧ 7 ವಿಕೆಟ್ ಗಳ ಜಯ ಸಾಧಿಸಿದೆ.

ಇನ್ನು ಭಾರತದ ಪರ ಜಸ್ ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು. 2ನೇ ಇನ್ನಿಂಗ್ಸ್ ನಲ್ಲಿ 144ರನ್ ಗಳಿಸಿದ ಜಾನಿ ಬೇರ್ ಸ್ಟೋವ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸರಣಿ ಸಮಬಲ
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತದ ಟಾರ್ಗೆಟ್‌ ಅನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಬೆನ್ನತ್ತಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿ ತಂಡವನ್ನು ಸರಣಿ ಸೋಲಿನಿಂದ ಮುಕ್ತಗೊಳಿಸಿದ್ದಾರೆ.

SCROLL FOR NEXT